ಬೆಂಗಳೂರು: ನಟ ಶರಣ್ ಅಭಿನಯದ 'ರಾಜ್ ವಿಷ್ಣು' ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಅವರ ಮತ್ತೊಂದು ಚಿತ್ರ ದಯಾಳ್ ಪದ್ಮನಾಭನ್ ನಿರ್ದೇಶನದ 'ಸತ್ಯ ಹರಿಶ್ಚಂದ್ರ' ಕೂಡ ಸಂಪೂರ್ಣಗೊಳ್ಳುವತ್ತ ಮುನ್ನಡೆದಿದೆ. ಈಗ ನಟ ಮತ್ತೊಂದು ಯೋಜನೆಯ ಸಿದ್ಧತೆಯಲ್ಲಿದ್ದು, ಇನ್ನು ಹೆಸರಿಡದ ಈ ಚಿತ್ರವನ್ನು ಸಂಭಾಷಣಕಾರನಾಗಿದ್ದು ಈಗ ನಿರ್ದೇಶಕನಾಗಿ ಭಡ್ತಿ ಹೊಂದಿರುವ ಅನಿಲ್ ಕುಮಾರ್ ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ 'ದಿಲ್ವಾಲ' ಸಿನೆಮಾವನ್ನು ನಿರ್ದೇಶಿಸಿದ್ದರು. ಇದನ್ನು ಎಸ್ ವಿ ಬಾಬು ನಿರ್ಮಿಸುತ್ತಿದ್ದಾರೆ. ಬಾಬು ಸದ್ಯಕ್ಕೆ ಗಣೇಶ್ ಅಭಿನಯದ 'ಪಟಾಕಿ' ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ,.
ಈ ಯೋಜನೆ ಯಶಸ್ವಿ ಸಿನೆಮಾ 'ಚೌಕ' ನಿರ್ದೇಶಿಸಿದ ತರುಣ್ ಸುಧೀರ್ ಅವರ ಮಾರ್ಗದರ್ಶನದಲ್ಲಿ ಮೂಡಿಬರುತ್ತಿದೆಯಂತೆ. ಇದಕ್ಕೆ ನಾಯಕನಟಿಯಾಗಲು ಪ್ರಣೀತಾ ಸುಭಾಷ್ ಅವರನ್ನು ಕೇಳಿಕೊಳ್ಳಲಾಗಿದೆಯಂತೆ. ಸದ್ಯಕ್ಕೆ ಶಿವರಾಜ್ ಕುಮಾರ್ ಅವರ 'ಲೀಡರ್' ಸಿನೆಮಾದ ಚಿತ್ರೀಕರಣ ಮುಗಿಸಿರುವ ಪ್ರಣೀತಾ, ತೆಲುಗು ಸಿನೆಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ.
ಎಲ್ಲವು ನಿಶ್ಚಯಿಸಿದಂತೆ ನಡೆದರೆ ಬೆಳ್ಳೆ ತೆರೆ ಮೇಲೆ ಶರಣ್-ಪ್ರಣೀತಾ ಹೊಸ ಜೋಡಿ ಪ್ರೇಕ್ಷಕರನ್ನು ರಂಜಿಸಲಿದೆ.
ನಟರು ಈ ಯೋಜನೆಗೆ ಸಹಿ ಮಾಡಿದ ಮೇಲೆ ಮೇ ೨೨ರ ನಂತರ ಅಧಿಕೃತ ಘೋಷಣೆ ನಡೆಯಲಿದೆ. ಈ ವರ್ಷದ ಕೊನೆಗೆ ಇದನ್ನು ಬಿಡುಗಡೆ ಮಾಡುವ ಯೋಜನೆಯನ್ನು ತಂಡ ಹಮ್ಮಿಕೊಂಡಿದೆ.
ಈಮಧ್ಯೆ 'ಪಟಾಕಿ' ಸಿನೆಮಾದ ಆಡಿಯೋ ಶನಿವಾರ ಬಿಡುಗಡೆಯಾಗಿದ್ದು, ಸೆನ್ಸಾರ್ ಮಂಡಳಿಯ ಪ್ರಮಾಣಪಾತ್ರಕ್ಕಾಗಿ ಕಾಯುತ್ತಿದೆ.