ಬೆಂಗಳೂರು: ದರ್ಶನ್ ಅವರ ೫೦ನೆಯ ಚಿತ್ರ 'ಕುರುಕ್ಷೇತ್ರ'ದ ಬಗ್ಗೆ ಕುತೂಹಲದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ದರ್ಶನ್ ದುರ್ಯೋಧನದ ಪಾತ್ರ ನಿರ್ವಹಿಸುತ್ತಿದ್ದು, ಉಳಿದ ಪಾತ್ರಧಾರಿಗಳ ಬಗ್ಗೆ ಊಹೆಯ ಆಟವು ಜಾರಿಯಲ್ಲಿದೆ.
ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶಿಸುತ್ತಿರುವ ಈ ಸಿನೆಮಾದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಬಾಹುಬಲಿ ಖ್ಯಾತಿಯ ತೆಲುಗು ನಟ ರಾಣಾ ನಟಿಸಲಿದ್ದಾರೆ ಎಂಬ ವದಂತಿಗಳ ನಡುವೆ ರವಿಚಂದ್ರನ್ ನಟಿಸುತ್ತಿರುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ. ಕನ್ನಡದ ಕ್ರೇಜಿ ಸ್ಟಾರ್ 'ಕುರುಕ್ಷೇತ್ರ'ದಲ್ಲಿ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಇದಕ್ಕಾಗಿ ನಟನ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಯಲಾಗಿದೆ. ಅವರು ಸಹಿ ಹಾಕಿದ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎನ್ನುವ ಮೂಲಗಳು "ಅವರು ವಸ್ತ್ರಗಳ ಹೊಂದಾಣಿಕೆಯನ್ನು ಪರೀಕ್ಷಿಸಿದ್ದಾರೆ ಮತ್ತು ಸಿನೆಮಾ ಕೆಲಸ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಸಂಭಾಷಣೆಯನ್ನು ಒದಗಿಸುವಂತೆ ಸೂಚಿಸಿದ್ದಾರೆ" ಎಂದಿದ್ದಾರೆ.
ಮಹಾಭಾತರದ ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ತಮ್ಮ ಮೀಸೆಯನ್ನು ತೆಗೆಯಲಿದ್ದಾರಂತೆ. ಇದೆ ಮೊದಲ ಬಾರಿಗೆ ದರ್ಶನ್ ಮತ್ತು ರವಿಚಂದ್ರನ್ ಒಟ್ಟಿಗೆ ನಟಿಸುತ್ತಿರುವುದು. ಈ ಹಿಂದೆ ದರ್ಶನ್ ಅವರ 'ಅಯ್ಯ' ಸಿನೆಮಾಗೆ ರವಿಚಂದ್ರನ್ ಸಂಗೀತ ನೀಡಿದ್ದರು. 'ಕುರುಕ್ಷೇತ್ರ'ಕ್ಕೆ ಹಂಸಲೇಖ ಸಂಗೀತ ಒದಗಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics