ಮುಂಬೈ: ಅವಹೇಳನಕಾರಿ ಮತ್ತು ಮಹಿಳಾ ವಿರೋಧಿ ಹೇಳಿಕೆಗೆ ತಮ್ಮ ಖಾತೆಯನ್ನೇ ವಜಾ ಮಾಡಿದ್ದಕ್ಕೆ ಟ್ವಿಟ್ಟರ್ ವಿರುದ್ಧ ವಾಗ್ದಾಳಿ ನಡೆಸಿರುವ ಗಾಯಕ ಅಭಿಜಿತ್ ಭಟ್ಟಾಚಾರ್ಯ ಟ್ವಿಟ್ಟರ್ ದೇಶವಿರೋಧಿ, ಪ್ರಧಾನಿ ನರೇಂದ್ರ ಮೋದಿ ವಿರೋಧಿ ಮತ್ತು ಹಿಂದೂ ವಿರೋಧಿ ಎಂದಿದ್ದು, ದೇಶದ ಧ್ವನಿಯನ್ನು ಅಡಗಿಸಲು ಟ್ವಿಟ್ಟರ್ ಪ್ರಯತ್ನಿಸುತ್ತಿದೆ ಎಂದು ಕೂಡ ದೂರಿದ್ದಾರೆ.
ತೀವ್ರ ಬಲಪಂಥೀಯ ಬಳಗದ ಬೆಂಬಲರಾಗಿರುವ ಅಭಿಜಿತ್, ಈ ಹಿಂದೆ ಕೂಡ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಪ್ರಗತಿಪರರ ವಿರುದ್ಧ ಕಾದಾಟಕ್ಕೆ ನಿಂತಿದ್ದರು.
ಜೆ ಎನ್ ಯು ವಿದ್ಯಾರ್ಥಿ ಶೆಹ್ಲಾ ರಶೀದ್ ಮತ್ತು ಇತರ ಮಹಿಳಾ ಬಳಕೆದಾರರ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದರಿಂದ ಮಂಗಳವಾರ ಅವರ ಖಾತೆಯನ್ನು ಟ್ವಿಟ್ಟರ್ ವಜಾಮಾಡಿತ್ತು.
ಇದರಿಂದ ಕುಪಿತರಾಗಿರುವ ಅಭಿಜಿತ್ "ದೇಶದ್ರೋಹಿಗಳಿಗೆ, ಭಾರತೀಯ ಸೇನೆಯ ವಿರೋಧಿಗಳಿಗೆ, ಮೋದಿ ವಿರೋಧಿಗಳಿಗೆ, ಹಿಂದೂ ವಿರೋಧಿಗಳಿಗೆ ಮತ್ತು ಭಯೋತ್ಪಾದಕರ ಬೆಂಬಲಿಗರಿಗೆ ಟ್ವಿಟ್ಟರ್ ವೇದಿಕೆಯಾಗಿದೆ. ಇವೆರೆಲ್ಲರೂ ನಕ್ಸಲರು. ಇವರಿಗೆ ಉಗ್ರ ಶಿಕ್ಷೆ ನೀಡಬೇಕು. ಇದು ಜಿಹಾದಿ ಟ್ವಿಟ್ಟರ್" ಎಂದು ವಾಟ್ಸ್ ಆಪ್ ಮೂಲಕ ಸುದ್ದಿ ಸಂಸ್ಥೆಯೊಂದಕ್ಕೆ ಸ್ವಿಟ್ಸರ್ ಲ್ಯಾಂಡ್ ನ ಇಂಟರ್ ಲೇಕನ್ ನಿಂದ ಸಂದೇಶ ಕಳುಹಿಸಿದ್ದಾರೆ.
"ನಾವು ಕೇವಲ ಗಾಯಕರು ಮಾತ್ರ ಅಲ್ಲ. .. ನಾವು ದೇಶದ ಧ್ವನಿ. ನಾವು ದೇಶದ್ರೋಹಿಗಳನ್ನು ಬಹಿರಂಗವಾಗಿ ವಿರೋಧಿಸುತ್ತೆವೆ. ಆದುದರಿಂದ ನಮ್ಮ ದ್ವನಿಯನ್ನು ಹತ್ತಿಕ್ಕಲು ಟ್ವಿಟರ್ ಪ್ರಯತ್ನಿಸುತ್ತಿದೆ" ಎಂದು ಅಭಿಜಿತ್ ಹೇಳಿದ್ದಾರೆ.
ಬಿಜೆಪಿ ಸಂಸದ ಮತ್ತು ಹಾಸ್ಯ ನಟ ಪರೇಶ್ ರಾವಲ್ ಕೂಡ ಖ್ಯಾತ ಲೇಖಕಿ ಮತ್ತು ಕಾರ್ಯಕರ್ತೆ ಅರುಂಧತಿ ರಾಯ್ ವಿರುದ್ಧ ಮಾಡಿದ್ದ ಅವಹೇಳನಕಾರಿ ಪ್ರತಿಕ್ರಿಯೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು,. ನಕಲಿ ವರದಿಯನ್ನು ಆಧರಿಸಿಕೊಂಡು ಮಾಡಿದ್ದ ಈ ಟ್ವೀಟ್ ತೆಗೆದುಹಾಕಲು ಟ್ವಿಟ್ಟರ್ ಸೂಚಿಸಿತ್ತು.
ಅಭಿಜಿತ್ ಮತ್ತು ಪರೇಶ್ ಅವರ ಬೆಂಬಲಕ್ಕೆ ನಿಂತಿದ್ದ ಗಾಯಕ ಸೋನು ನಿಗಮ್, ಟ್ವಿಟ್ಟರ್ ನಿಂದ ಹೊರಬರುತ್ತಿರುವುದಾಗಿ ಘೋಷಿಸಿದ್ದರು.