ಬೆಂಗಳೂರು: ಮೇ ನಲ್ಲಿ ಚಿತ್ರೀಕರಣ ಪ್ರಾರಂಭವಾದ 'ಸಂಹಾರ' ಚಲನಚಿತ್ರದ ಮೊದಲ ಹಂತದ ಚಿತ್ರೀಕರಣ ಮಂಗಳೂರಿನಲ್ಲಿ ಮುಕ್ತಾಯವಾಗಿದೆ. ಈ ಚಿತ್ರೀಕರಣ ೧೫ ದಿನಗಳವರೆಗೆ ನಡೆದಿತ್ತು. ಗುರು ದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಹರಿಪ್ರಿಯಾ ಮತ್ತು ಕಾವ್ಯ ಶೆಟ್ಟಿ ಅವರಿಗೆ ನೀಡಿರುವ ಪಾತ್ರಗಳನ್ನು ಗಮನಿಸಿದರೆ, ಇದು ತಮಿಳು ಸಿನೆಮಾ 'ಅದೇ ಕಣ್ಗಳ್' ನಿಂದ ಸ್ಫೂರ್ತಿ ಪಡೆದಿರಬಹುದೇ ಎಂದು ಊಹಿಸಬಹುದಾಗಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಈ ತಮಿಳು ಸಿನೆಮಾವನ್ನು ರೋಹಿನ್ ವೆಂಕಟೇಶ್ ನಿರ್ದೇಶಿಸಿದ್ದರು.
ಈ ರೊಮ್ಯಾಂಟಿಕ್ ಥ್ರಿಲ್ಲರ್ ಬಗ್ಗೆ ಯಾವುದೇ ಮಾಹಿತಿಯನ್ನು ನಿರ್ದೇಶಕ ನೀಡದೆ ಇದ್ದರು ಬಲ್ಲ ಮೂಲಗಳ ಪ್ರಕಾರ ಚಿರಂಜೀವಿ ಅಂಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಕಾವ್ಯ ಶೆಟ್ಟಿ ಪತ್ರಕರ್ತೆಯ ಪಾತ್ರ ಪಡೆದಿದ್ದಾರೆ. ಮತ್ತು ಚಿಕ್ಕಣ್ಣನವರನ್ನು ಪೊಲೀಸ್ ಪಾತ್ರ. ಹರಿಪ್ರಿಯಾ ಅವರು ಮೊದಲ ಬಾರಿಗೆ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.
'ಉಗ್ರಂ' ನಟಿ ಮೊದಲಿನಿಂದಲೂ ಆಸಕ್ತಿದಾಯಕ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡು ಬಂದವರು. 'ರಿಕ್ಕಿ' ಮತ್ತು 'ನೀರ್ ದೋಸೆ' ಸಿನಿಮಾಗಲ್ಲಿ ವಿಶಷ್ಟ ಪಾತ್ರಗಳಲ್ಲಿ ಅಭಿನಯಿಸಿದ ಮೇಲೆ ಈಗ ಮತ್ತೊಂದು ಸವಾಲಿನ ಪಾತ್ರಕ್ಕೆ ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.
ಎ ವೆಂಕಟೇಶ್ ಮತ್ತು ಆರ್ ಸುಂದರ ಕಾಮರಾಜ್ ನಿರ್ಮಿಸುತ್ತಿರುವ ಈ ಸಿನೆಮಾಗೆ ರವಿ ಬಸರೂರ್ ಸಂಗೀತ ನೀಡುತ್ತಿದ್ದು, ಜಗದೀಶ್ ವಾಲಿ ಅವರ ಸಿನೆಮ್ಯಾಟೋಗ್ರಫಿ ಇದೆ.