ಪಣಜಿ: ಮಲೆಯಾಳಂ ಚಿತ್ರ 'ಎಸ್ ದುರ್ಗಾ'ದ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರು ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅಧಿಕಾರದಲ್ಲಿರುವ ಜನ ತಮ್ಮ ಉದ್ದೇಶ ಸಾಧನೆಗಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ ಸಿ) ಕೇರಳ ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಗೋವಾದಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಮಲಯಾಳಂನ ವಿವಾದಾತ್ಮಕ ಚಿತ್ರ 'ಎಸ್ ದುರ್ಗಾ' (ಸೆಕ್ಸಿ ದುರ್ಗಾ) ಪ್ರದರ್ಶಿಸಲು ಅನುಮತಿ ನೀಡಿದೆ, ಮರು ಪರಿಶೀಲಿಸುವಂತೆ ಆದೇಶ ನೀಡಿದೆ.
ಸಿಬಿಎಫ್ ಸಿ ನಿರ್ಧಾರಕ್ಕೆ ಫೇಸ್ ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಚಿತ್ರದ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರು, ನನ್ನ ಚಿತ್ರ ಐಎಫ್‌ಎಫ್‌ಐ ನಲ್ಲಿ ಪ್ರದರ್ಶನ ಕಾಣದಿರುವ ಬಗ್ಗೆ ಬೇಸರ ಇಲ್ಲ. ಆದರೆ ಅಧಿಕಾರದಲ್ಲಿರುವವರು ನ್ಯಾಯಾಂಗವನ್ನು ವಿರೋಧಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
'ನನಗೆ ಸ್ವಲ್ಪವೂ ಬೇಸರ ಆಗಿಲ್ಲ. ಆದರೆ ಮತ್ತೊಂದು ಕಡೆ ಸಂತೋಷವಾಗಿದೆ. ಏಕೆಂದರೆ ಸಂಘ ಅಧಿಕಾರಕ್ಕೆ ಏನಾಗುತ್ತೆ? ಎಂದು ನನಗೆ ಹಲವರು ಪ್ರಶ್ನಿಸುತ್ತಿದ್ದರು. ನನ್ನ ಚಿತ್ರದಿಂದ ಅವರಿಗೆಲ್ಲ ಉತ್ತರ ಸಿಕ್ಕಿದೆ 'ಎಸ್ ದುರ್ಗಾ' ನಿರ್ದೇಶಕ ಹೇಳಿದ್ದಾರೆ.
ಅಧಿಕಾರದಲ್ಲಿರುವ ಜನ ತಮಗೆ ಇಷ್ಟವಾಗದಿರುವುದನ್ನು ಹಾಳು ಮಾಡಲು ಏನು ಬೇಕಾದರೂ ಮಾಡುತ್ತಾರೆ ಮತ್ತು ಕಾನೂನು ಹಾಗೂ ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ನನ್ನ ಚಿತ್ರ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.