ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ನೇತೃತ್ವದಲ್ಲಿ ನಾಳೆ ಬಿಗ್ ಬಾಸ್ ಕನ್ನಡ ಸೀಸನ್-5 ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಸುದೀಪ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಸೀಸನ್-5, ತಮ್ಮ ಪ್ರೊಡಕ್ಷನ್ ಹೌಸ್ ನಲ್ಲಿ ಮೂಡಿಬರುತ್ತಿರುವ ಚಿತ್ರ, ಹಾಲಿವುಡ್ ಪ್ರಾಜೆಕ್ಟ್, ತಮ್ಮ ಸಹ ನಟರು ಮತ್ತು ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಾನು ಬಿಗ್ ಬಾಸ್ ಸ್ಪರ್ಧಿಗಳ ನಡುವಿನ ಜಗಳಗಳಿಂದ ಅನೇಕ ವಿಷಯಗಳನ್ನು ಕಲಿತೆ: ಬಿಗ್ ಬಾಸ್ ಸೀಸನ್ -5ನ್ನು ಎಂದಿನಂತೆ ಈ ಬಾರಿಯೂ ನಾನು ನಡೆಸುತ್ತಿದ್ದು ಈ ಬಾರಿ 5 ಮಂದಿ ಸೆಲೆಬ್ರಿಟಿಗಳು ಮತ್ತು 6 ಮಂದಿ ಜನಸಾಮಾನ್ಯರು ಪ್ರವೇಶ ಪಡೆಯಲಿದ್ದಾರೆ. ವಿಶೇಷವೆಂದರೆ ಸ್ವತಃ ನನಗೇ ಯಾರ್ಯಾರು ಸ್ಪರ್ಧಿಗಳು ಎಂದು ಗೊತ್ತಿಲ್ಲ. ನನಗೆ ತಿಳಿದುಕೊಳ್ಳಲು ಇಷ್ಟವಿಲ್ಲ. ನಾಳೆ ಬಿಗ್ ಬಾಸ್ ಆರಂಭದ ದಿನ ವೇದಿಕೆಯಲ್ಲಿಯೇ ಅವರನ್ನು ನೋಡಲು ಇಷ್ಟಪಡುತ್ತೇನೆ. ನಾನು ಶೋವನ್ನು ನಡೆಸಿಕೊಡುವವನಾದರೂ ಕೂಡ ಬೇರೆಯವರಂತೆ ನಾನು ಕೂಡ ಪ್ರೇಕ್ಷಕ. ಒಂದು ವ್ಯತ್ಯಾಸವೆಂದರೆ ಸ್ಪರ್ಧಿಗಳನ್ನು ನಾನು ಹತ್ತಿರದಿಂದ ನೋಡಿ ಮಾತನಾಡಿಸುತ್ತೇನೆ.
ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. ಸ್ಪರ್ಧಿಗಳಿಗೆ ಬರುವ ಮತಗಳ ನಿಯಂತ್ರಣ ನಮ್ಮ ಕೈಯಲ್ಲಿರುವುದಿಲ್ಲ. ಅದು ಜನರಿಂದ ಬರುವುದು. ಅಂತಿಮವಾಗಿ ಜನರೇ ನಿರ್ಧರಿಸುವವರು. ನಾನು ಕೇವಲ ಕೆಲವು ಸುಳಿವುಗಳನ್ನು ನೀಡಬಹುದಷ್ಟೆ. ಇದರಿಂದ ಜನರು ಸೂಕ್ತ ಸ್ಪರ್ಧಿಯನ್ನು ಆಯ್ಕೆ ಮಾಡಲು ಸಹಾಯವಾಗಬಹುದು. ನಾನು ಇಲ್ಲಿ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಎಂದಿನಂತೆ ಒತ್ತಡ ಈ ಬಾರಿಯೂ ಇರುತ್ತದೆ. ಆದರೆ ನಾನು ಇವತ್ತಿಗೆ ಜೀವಿಸುವವನು. ಕೆಲವೊಮ್ಮೆ ರಾಜಕೀಯ ಪ್ರಭಾವ ಕೂಡ ಇರಬಹುದು. ಆದರೆ ಅವಕ್ಕೆಲ್ಲ ಅಂಜುವವನು ನಾನಲ್ಲ. ಒತ್ತಡಕ್ಕೆ ನಾನು ಬಾಗುವುದಿಲ್ಲ. ನನ್ನನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯನ ಗುಣ, ನಡತೆ ಕುರಿತು ಇರುವ ರಿಯಾಲಿಟಿ ಶೋ ಬಿಗ್ ಬಾಸ್. ಈ ಶೋವನ್ನು ನಡೆಸಿಕೊಡುವುದು ನನಗೆ ಒತ್ತಡವನ್ನು ತೆಗೆದುಹಾಕಲು ಇರುವ ಮಾರ್ಗ. ಸ್ಪರ್ಧಿಗಳ ನಡುವಿನ ಜಗಳಗಳಿಂದ ನಾನು ವಿಷಯಗಳನ್ನು ಅರ್ಥೈಸಿ ಕಲಿಯುತ್ತೇನೆ.
ಪ್ರೇಮ್ ಉತ್ತಮ ನಿರ್ದೇಶಕ: ವಿಲನ್ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದ್ದು, ನಿರ್ದೇಶಕ ಪ್ರೇಮ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಮನೋಹರ್ ಚಿತ್ರ ನಿರ್ಮಿಸುತ್ತಿದ್ದಾರೆ. ಪ್ರೇಮ್ ನಲ್ಲಿ ಒಬ್ಬ ಉತ್ತಮ ನಿರ್ದೇಶಕನನ್ನು ಕಂಡಿದ್ದೇನೆ. ಚಿತ್ರದ ಬಗ್ಗೆ ಅವರಲ್ಲಿರುವ ಪ್ರೀತಿಯನ್ನು ಬೇರೆ ನಿರ್ದೇಶಕರಿಂದ ವಿಭಿನ್ನವಾಗಿ ಕಂಡಿದ್ದೇನೆ. ಜನರು ಪ್ರೇಮ್ ನ್ನು ಶೋ ಆಫ್ ಎಂದು ಕರೆಯುತ್ತಾರೆ ಆದರೆ ಅವರು ಹಾಗಿಲ್ಲ. ಅವರ ಜೊತೆ ಕೆಲಸ ಮಾಡುವುದು ಖುಷಿ ತರುತ್ತದೆ. ಸಿನಿಮಾಕ್ಕಾಗಿ ಅವರು ಶ್ರಮ ಪಡುವುದು, ತಲೆಕೆಡಿಸಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ. ನವೆಂಬರ್ ನಲ್ಲಿ ಚಿತ್ರದ ಮುಂದಿನ ಶೂಟಿಂಗ್.
ಅನಗತ್ಯ ವಿಷಯಗಳ ಬಗ್ಗೆ ಶಿವ ರಾಜ್ ಕುಮಾರ್ ಗಮನ ಕೊಡುವುದಿಲ್ಲ: ಶಿವರಾಜ್ ಕುಮಾರ್ ರಂತಹ ನಟರ ಜೊತೆ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಅವರು ಅಸಂಬದ್ಧ ವ್ಯಕ್ತಿಯಲ್ಲ, ಸಾಕಷ್ಟು ಉತ್ಸಾಹ, ಶಕ್ತಿ ಅವರಲ್ಲಿದೆ. ಹೀಗಾಗಿ ಇಷ್ಟು ದೀರ್ಘ ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಇದ್ದಾರೆ. ಅವರು ಹಿರಿಯರಾದರೂ ಕೂಡ ಪೀಳಿಗೆಯ ಅಂತರವಿದ್ದರೂ ಕೂಡ ಸಿನಿಮಾ ವಿಷಯಕ್ಕೆ ಬಂದಾಗ ಯಾವುದೇ ರೀತಿಯ ಕಟ್ಟುನಿಟ್ಟುಗಳಿಲ್ಲ, ಸೆಟ್ ನಲ್ಲಿ ಆರಾಮಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ. ನಮ್ಮಿಬ್ಬರ ಪಾತ್ರಗಳನ್ನು ಚಿತ್ರದಲ್ಲಿ ಸಮನಾಗಿ ತೂಕ ಮಾಡಿದ್ದಾರೆ ಪ್ರೇಮ್. ಇಲ್ಲಿಯವರೆಗೆ ಚಿತ್ರದ ಶೂಟಿಂಗ್ ಸರಾಗವಾಗಿ ಸಾಗಿದೆ.
ಪೈಲ್ವಾನ್ ಗೆ ದೇಹದ ಫಿಟ್ ನೆಸ್: ವಿಲನ್ ನಂತರ ಪೈಲ್ವಾನ್ ಚಿತ್ರದ ಶೂಟಿಂಗ್ ಆರಂಭ. ಕುಸ್ತಿಪಟುವಾಗಿ ಚಿತ್ರದ ಪೋಸ್ಟರ್ ಸಿನಿ ಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಆ ನಿರೀಕ್ಷೆಯನ್ನು ಹುಸಿಗೊಳಿಸಬಾರದು. ಪೈಲ್ವಾನ್ ಗೆ ದೇಹದ ಫಿಟ್ ನೆಸ್ ಕಾಯ್ದುಕೊಳ್ಳುತ್ತಿದ್ದೇನೆ.
ಎರಡು ಚಿತ್ರಗಳನ್ನು ಒಟ್ಟೊಟ್ಟಿಗೆ ಮಾಡುವುದು: ನಾನು ಅನೇಕ ಕೆಲಸಗಳನ್ನು ಒಟ್ಟಿಗೆ ಮಾಡಲು ಬಯಸುತ್ತೇನೆ. ಆದರೆ ಅದು ಸಾಧ್ಯವಿಲ್ಲ. ಎರಡು ಚಿತ್ರಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸಲು ಸಾಧ್ಯವಿಲ್ಲ. ಆದರೂ ಪ್ರಯತ್ನಿಸುತ್ತಿದ್ದೇವೆ. ನಾನು ಮಾಡುವ ಕೆಲಸದಲ್ಲಿ ಶೇಕಡಾ 100ರಷ್ಟು ಶ್ರಮವನ್ನು ಹಾಕಲು ಪ್ರಯತ್ನಿಸುತ್ತೇನೆ.
ಚಿರಂಜೀವಿ ಜೊತೆ ತೆಲುಗು ಚಿತ್ರ ಇನ್ನೂ ನಿರ್ಧಾರವಾಗಿಲ್ಲ: ಚಿರಂಜೀವಿಯವರ 151ನೇ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನು ನಿರ್ಧರಿಸಿಲ್ಲ. ನನ್ನ ಪೂರ್ವ ಬದ್ಧತೆಯಿಂದಾಗಿ ಆ ಚಿತ್ರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ 80ರಿಂದ 90 ದಿನಗಳ ಸಮಯ ನೀಡುವುದು ಕಷ್ಟವಾಗುತ್ತದೆ. ಚಿತ್ರದ ಕುರಿತು ಮಾತುಕತೆ ನಡೆಯುತ್ತಿದೆ.
ಅಂಬರೀಷ್ ನನ್ನ ಜೀವನದಲ್ಲಿ ಆತ್ಮ ವಿಶ್ವಾಸ ತುಂಬಿದ್ದಾರೆ: ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದಲ್ಲಿ ಅಂಬರೀಷ್ ಅವರೊಂದಿಗೆ ನಟಿಸಲು ಕಾತರನಾಗಿದ್ದೇನೆ. ಈ ಚಿತ್ರದ ಬಗ್ಗೆ ಅಂಬರೀಷ್ ಅವರು ತುಂಬಾ ಆಸಕ್ತಿ ಹೊಂದಿದ್ದಾರೆ. ಕೆಲವು ಸಮಯಗಳಿಂದ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿರುವ ಅವರು ಉತ್ಸಾಹದಿಂದ ಕಾಣುತ್ತಿದ್ದಾರೆ. ಅವರು ನನ್ನಲ್ಲಿ ತುಂಬಾ ಆತ್ಮ ವಿಶ್ವಾಸ ಮೂಡಿಸಿದ್ದಾರೆ. ಪ್ರಾಜೆಕ್ಟ್ ಬಗ್ಗೆ ತುಂಬಾ ಮಾತುಕತೆ ನಡೆದಿದೆ.
ಇನ್ನು ಕೆಲ ದಿನಗಳಲ್ಲಿ ಮತ್ತೆ ಕ್ಯಾಮರಾ ಹಿಂದೆ ಕೆಲಸ ಮಾಡಬಹುದು: ನಿರ್ದೇಶಕನಾಗಿ ಕೆಲಸ ಮಾಡಿ ಬಹಳ ಸಮಯಗಳಾದವು. ಕ್ಯಾಮರಾ ಹಿಂದೆ ನಿಂತು ಕೆಲಸ ಮಾಡುವುದೆಂದರೆ ನನಗೆ ಇಷ್ಟ. ಆದರೆ ಇತ್ತೀಚೆಗೆ ಯುವಕರು ಹೆಚ್ಚಾಗಿ ನಿರ್ದೇಶಕರಾಗುತ್ತಿದ್ದಾರೆ. ಸಿನಿಮಾ ಸೋತಾಗ ಅಥವಾ ಬೇಡಿಕೆ ಕಡಿಮೆಯಾದಾಗ ಕಲಾವಿದನ ಕಲೆ ಯಾವತ್ತಿಗೂ ಸಾಯುವುದಿಲ್ಲ. ಕಲಾವಿದನ ಬಗ್ಗೆ ಯಾರೂ ಏನೂ ಹೇಳದಾಗ, ಬರೆಯದಾಗ ಮಾತ್ರ ಕಲಾವಿದ ಸಾಯುತ್ತಾನೆ. ಇಂದು ಅನೇಕ ಯುವಕರು ನಿರ್ದೇಶಕರಾಗುತ್ತಿದ್ದಾರೆ, ಹೊಸ ಹೊಸ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಅದು ನಟನಾಗಿ ನನ್ನ ಅಗತ್ಯಗಳನ್ನು ಪೂರೈಸುತ್ತದೆ. ಒಂದು ದಿನ ಮತ್ತೆ ನಿರ್ದೇಶಕನಾಗಿ ತೆರೆಯ ಹಿಂದೆ ಕೆಲಸ ಮಾಡುತ್ತೇನೆ, ಅದರಲ್ಲಿ ನಟಿಸಲೇಬೇಕೆಂದೇನಿಲ್ಲ.
ಉಪೇಂದ್ರ ನನ್ನ ಸ್ನೇಹಿತ, ಅವರ ರಾಜಕೀಯ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇನೆ, ಆದರೆ ಪ್ರಚಾರಕ್ಕೆ ಹೋಗುವುದು ನನ್ನ ಮಿತಿಗೆ ಮೀರಿದ್ದು: ಉಪೇಂದ್ರ ರಾಜಕೀಯಕ್ಕೆ ಬರುತ್ತಿದ್ದಾರೆಂದರೆ ಸಹಜವಾಗಿ ಅಭಿಮಾನಿಗಳಿಗೆ ನಾನು ಮುಂದಿನ ಚುನಾವಣೆಗಳಲ್ಲಿ ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆಯೇ ಎಂದು ಕುತೂಹಲವಿರುತ್ತದೆ. ಉಪೇಂದ್ರ ಅವರು ನನ್ನ ಸ್ನೇಹಿತ. ನಾವೆಲ್ಲ ಒಟ್ಟಿಗೆ ಬೆಳೆದವರು. ಅವರು ಬಯಸಿದ್ದನ್ನು ಮಾಡಲು ಹೆಜ್ಜೆ ಮುಂದಿಟ್ಟಿರುವುದು ನನಗೆ ಖುಷಿ ತಂದಿದೆ. ನಾವೆಲ್ಲ ಅವರನ್ನು ಬೆಂಬಲಿಸುತ್ತೇವೆ. ಆದರೆ ಪ್ರಚಾರಕ್ಕೆ ಹೋಗುವುದು ನನ್ನ ಮಿತಿಗೆ ಮೀರಿದ್ದು. ನಾನು ಅದರಿಂದ ದೂರವಿರುತ್ತೇನೆ. ನನಗೆ ಗ್ಯಾರಂಟಿ ಇಲ್ಲದ ವಿಷಯಗಳ ಬಗ್ಗೆ ನಾನು ಭರವಸೆ ನೀಡುವುದಿಲ್ಲ.
ಹಾಲಿವುಡ್ ಪ್ರಾಜೆಕ್ಟ್ ಕೆಲಸ ಪ್ರಗತಿಯಲ್ಲಿ: ಹಾಲಿವುಡ್ ಚಿತ್ರಕ್ಕೆ ಇನ್ನೂ ಶೀರ್ಷಿಕೆಯಿಟ್ಟಿಲ್ಲ. ಅದಕ್ಕಾಗಿ ಕಾಯುತ್ತಿದ್ದೇನೆ. ಇದೇ 22ರಂದು ಹಾಲಿವುಡ್ ಚಿತ್ರತಂಡ ಬೆಂಗಳೂರಿಗೆ ಬರುತ್ತಿದ್ದು ಅದರ ಬಗ್ಗೆ ಸದ್ಯದಲ್ಲಿಯೇ ಹೆಚ್ಚಿನ ಮಾಹಿತಿ ನೀಡುವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics