ಸಿನಿಮಾ ಸುದ್ದಿ

ನೀನಾಸಂ ಸತೀಶ್ ಈ ಪರಿ ಕೋಪಗೊಳ್ಳಲು ಕಾರಣವೇನು? ಫೇಸ್ ಬುಕ್ ಲೈವ್ ನಲ್ಲಿ ನಟ ಹೇಳಿದ್ದೇನು?

Srinivasamurthy VN
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸೌಮ್ಯ ಸ್ವಭಾವದ ನಟ ಎಂದೇ ಗುರುತಿಸಿಕೊಂಡಿದ್ದ ನೀನಾಸಂ ಸತೀಶ್ ಈ ಬಾರಿ ಫುಲ್ ಗರಂ ಆಗಿದ್ದು, ಫೇಸ್ ಬುಕ್ ಲೈವ್ ನಲ್ಲಿ ಕನ್ನಡ ಚಿತ್ರರಂಗದ ಸಂಕಷ್ಟಗಳನ್ನು ಮತ್ತು ಮಲ್ಟಿಪ್ಲೆಕ್ಸ್ ತಾರತಮ್ಯವನ್ನು ಎತ್ತಿ ತೋರಿಸುವ ಕೆಲಸ ಮಾಡಿದ್ದಾರೆ.
ಇತ್ತೀಚೆಗಷ್ಟೇ ನಟ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನಗೊಳ್ಳುತ್ತಿದೆ. ಆದರೆ ಭರ್ಜರಿ ಕಲೆಕ್ಷನ್ ಹೊರತಾಗಿಯೂ ಈ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಗಳು ತಾರತಮ್ಯ ತೋರುತ್ತಿವೆ ಎಂದು ಸತೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ಸತೀಶ್ ಹೇಳಿಕೊಂಡಿರುವಂತೆ ಹೈದರಾಬಾದ್‌ ನ ಮಲ್ಟಿಪ್ಲೆಕ್ಸ್‌ನಲ್ಲಿ 'ಅಯೋಗ್ಯ' ಚಿತ್ರ ಪ್ರದರ್ಶಿಸಲು ಅವರಿಗೆ ಅವಕಾಶ ಸಿಕ್ಕಿಲ್ಲವಂತೆ. ಈ ಕುರಿತು ಚಿತ್ರತಂಡ ಅಲ್ಲಿನ ವಾಣಿಜ್ಯ ಮಂಡಳಿ ಅನುಮತಿ ಪಡೆಯಬೇಕು. ಆದರೆ ಕರ್ನಾಟಕದಲ್ಲಿ ಮಾತ್ರ ಪರ ಭಾಷಾ ಚಿತ್ರಗಳಿಗೆ ರೆಡ್ ಕಾರ್ಪೆಟ್ ಹಾಕಲಾಗುತ್ತಿದ್ದು, ವಾಣಿಜ್ಯ ಮಂಡಳಿಯ ಯಾವುದೇ ರೀತಿಯ ಅನುಮತಿ ಕೂಡ ಇಲ್ಲದೇ ತಮಗೆ ಬೇಕಾದಷ್ಚು ಷೋಗಳನ್ನು ಮಲ್ಟಿಪ್ಲೆಕ್ಸ್ ಗಳು ಹಾಕುತ್ತಿವೆ ಎಂದು ಸತೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಬುಕ್ ಮೈ ಷೋ ರೇಟಿಂಗ್ ಕುರಿತು ಸತೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ಚಿತ್ರ ಅಯೋಗ್ಯಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹತ್ತು ಕೋಟಿ ರೂಪಾಯಿ ಕ್ಲಬ್‌ ಗೆ ಚಿತ್ರ ಪ್ರವೇಶ ಪಡೆದಿದೆ. ಆದರೂ ಹೈದರಾಬಾದ್‌ನಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ‌. ಪರಭಾಷೆ ಚಿತ್ರಗಳ ಸಾವಿರಾರು ಶೋ ಕರ್ನಾಟಕದಲ್ಲಿ ನಡೆಯುತ್ತದೆ. ಆ ಚಿತ್ರಗಳು ಕೋಟ್ಯಂತರ ರೂಪಾಯಿ ದುಡ್ಡು ಮಾಡಿಕೊಳ್ಳುತ್ತವೆ. ಆದರೆ ಹೊರರಾಜ್ಯಗಳ ಕನ್ನಡಿಗರ ಅಭಿಮಾನದ ಬೇಡಿಕೆ ಈಡೇರಿಸಲು ನಮಗೆ ಅವಕಾಶವೇ ಸಿಗುತ್ತಿಲ್ಲ. ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ ನಲ್ಲಿ ಚಿತ್ರ ಪ್ರದರ್ಶಿಸಲು ಅಲ್ಲಿನ ವಾಣಿಜ್ಯ ಮಂಡಳಿಯ ಅನುಮತಿ ಬೇಕಂತೆ. ಇದ್ಯಾವ ನ್ಯಾಯ. ಇದನ್ನು ಪ್ರಶ್ನಿಸಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡುವೆ ಎಂದು ಹೇಳಿದರು. 
ಬುಕ್ ಮೈ ಷೋ ಸೇರಿದಂತೆ ವಿವಿಧೆಡೆ 'ಅಯೋಗ್ಯ' ಚೆನ್ನಾಗಿಲ್ಲ ಎಂದು ವಿಮರ್ಶಿಸಿರುವವರನ್ನು ತರಾಟೆಗೆ ತೆಗೆದುಕೊಂಡ ಸತೀಶ್, 'ಮೊದಲು ಸಿನಿಮಾ ನೋಡಿ, ಆಮೇಲೆ ವಿಮರ್ಶೆ ಬರೆಯಿರಿ' ಎಂದು ತಾಕೀತು ಮಾಡಿದರು. ಇದೇ ಸಂದರ್ಭ ‘ನನ್ನ ಮುಂದಿನ ಚಿತ್ರ 'ಚಂಬಲ್' ಎಂದು ಘೋಷಿಸಿದರು. 
SCROLL FOR NEXT