ಸಿನಿಮಾ ಸುದ್ದಿ

ಕೆಜಿಎಫ್ ಚಿತ್ರದಲ್ಲಿ ಕೋಲಾರದ ಜನತೆ ಬಗ್ಗೆ ಅಪಪ್ರಚಾರ ಆರೋಪ, ಕರಪತ್ರ ಪತ್ತೆ!

Srinivasamurthy VN
ಕೋಲಾರ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ತೆರೆ ಕಂಡು ಭರ್ಜರಿ ಯಶಸ್ಸು ಸಾಧಿಸುತ್ತಿರುವ ಬೆನ್ನಲ್ಲೇ ಚಿತ್ರದ ವಿರುದ್ಧ ಅಪಪ್ರಚಾರದ ಕರಪತ್ರ ದೊರೆತಿದೆ.
ಇತ್ತೀಚೆಗೆ ನಿನ್ನೆಯಷ್ಟೇ ಕೆಜಿಎಫ್ ಚಿತ್ರದ ಬಿಡುಗಡೆಗೆ ತಡೆ ಕೋರಿ ವೆಂಕಟೇಶ್ ಎಂಬುವವರು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರ ಭಾರಿ ಪ್ರಚಾರ ಪಡೆದು ಬಳಿಕ ಅರ್ಜಿ ವಾಪಸ್ ಪಡೆಯಲಾಗಿದೆ. ಇದರ ನಡುವೆಯೇ ಕೋಲಾರದಲ್ಲಿ ಕೆಜಿಎಫ್ ಚಿತ್ರದ ವಿರುದ್ಧ ಕೆಲ ಅನಮಾಧೇಯ ವ್ಯಕ್ತಿಗಳು ಕರಪತ್ರಗಳ ಮೂಲಕ ಅಪಪ್ರಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
'ಕೆಜಿಎಫ್ ನಾಗರಿಕರು' ಎನ್ನುವ ಹೆಸರಿನಲ್ಲಿ ಚಿತ್ರದ ವಿರುದ್ಧ ಕರಪತ್ರ ಹೊರಡಿಸಲಾಗಿದ್ದು, ಇದರಲ್ಲಿ 'ಕೆಜಿಎಫ್ ಸಿನಿಮಾ ರೌಡಿಸಂ, ಕ್ರೂರ, ಕೊಲೆ-ದೊಂಬಿ ಬಗ್ಗೆ ಚಿತ್ರಿಸಿ ನಮ್ಮ ಊರಿನ ಮಾನ, ಮಾರ್ಯಾದೆ ಹಾಳು ಮಾಡಿದ್ದಾರೆ. ನಮ್ಮನ್ನು ಕೊಲೆಗಾರರು, ದೊಂಬಿಕೋರರು, ರಕ್ತ ಪಿಪಾಸುಗಳು, ಕ್ರೂರ ಸ್ವಭಾವದವರು, ಇಲ್ಲಿಯ ಜನರು ರೌಡಿಗಳು ಎಂದು ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ಮೂಲಕ ನಗರಕ್ಕೆ ಹಾಗೂ ಇಲ್ಲಿಯ ಜನರಿಗೆ ಅಪಮಾನ ಮಾಡಲಾಗಿದೆ.
ಇಲ್ಲಿಯ ದಲಿತರ ಬಗ್ಗೆ ಹೀನವಾಗಿ ಚಿತ್ರ ತಯಾರಿಸಿ ಪ್ರಪಂಚಕ್ಕೆಲ್ಲಾ ಪ್ರಚಾರ ಮಾಡಿರುವುದು ಭಾರತದ ಸಂವಿಧಾನದಕ್ಕೆ ಧಕ್ಕೆ ಮಾಡಿದಂತೆ. ಡಾ. ಅಂಬೇಡ್ಕರ್ ಅವರ ಸೇವೆಗೆ ಹಾಗೂ ಮಾನವ ಹಕ್ಕುಗಳಿಗೆ ಅಡ್ಡಗಾಲು ಮಾಡಿರುವ ಈ ಚಿತ್ರ ಬಿಡುಗಡೆಯನ್ನು ತಡೆದು, ಮಾನವ ಹಕ್ಕುಗಳನ್ನು ಮತ್ತು ದಲಿತರನ್ನು ರಕ್ಷಿಸಲು ಬನ್ನಿ ಒಂದುಗೂಡಿ. ನಮ್ಮನ್ನು, ನಮ್ಮ ಜೀವವನ್ನು ಮತ್ತು ನಮ್ಮ ಊರನ್ನು ರಕ್ಷಿಸೋಣ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕೆಜಿಎಫ್ ಚಿತ್ರದ ವಿರುದ್ಧ ಹೂಡಿರುವ ಈ ಷಡ್ಯಂತ್ರದ ಕರಪತ್ರದಲ್ಲಿ ತಮಿಳು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
SCROLL FOR NEXT