ತೋಳಿನ ಸ್ನಾಯುಗಳು, ಆಬ್ಸ್ ಮತ್ತು ಫಿಟ್ನೆಸ್ ಕಡೆಗೆ ನಟ ಸತೀಶ್ ನೀನಾಸಂ ಒತ್ತು ನೀಡುತ್ತಿದ್ದಾರೆ. ಇದಕ್ಕಾಗಿ ಹಗಲಿರುಳು ಕಸರತ್ತು ನಡೆಸಿದ್ದಾರೆ. ಗಡಸು ಪುರುಷರ ನೋಟದಲ್ಲಿ ಅವರು ತಮ್ಮ ಮುಂಬರುವ ಚಿತ್ರ ಅಯೋಗ್ಯದಲ್ಲಿ ನೋಡುಗರನ್ನು ಆಕರ್ಷಿಸಲಿದ್ದಾರೆ.ನಟ ರವಿಶಂಕರ್ ಮುಂದೆ ಫೈಟಿಂಗ್ ದೃಶ್ಯಕ್ಕೆ ಬೇಕಾಗಿ ಸತೀಶ್ ನೀನಾಸಂ ತಮ್ಮ ದೇಹವನ್ನು ಹುರಿಗೊಳಿಸಿದ್ದಾರೆ.
ಸಿನಿಮಾದಲ್ಲಿ ಎಂದಿನ ಸಾಮಾನ್ಯ ಆಕ್ಷನ್ ಸೀನ್ ಗಳಿಗಿಂತ ವಿಭಿನ್ನವಾಗಿ ಮಾಡಿ ತೋರಿಸಬೇಕೆಂದು ನಿರ್ಧರಿಸಿ ಫಿಟ್ನೆಸ್ ಗೆ ಸೇರಿದೆ, ಆ ಮೂಲಕ ದೇಹವನ್ನು ದಂಡಿಸಿದೆ ಎನ್ನುತ್ತಾರೆ ಸತೀಶ್. ಹಲವು ವರ್ಷಗಳಿಂದ ದೇಹವನ್ನು ಈ ರೀತಿ ಮಾಡಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದೆ ಎನ್ನುತ್ತಾರೆ ಅವರು.
ಬಾಲಿವುಡ್ ನಲ್ಲಿ ಹೀಗೆ ದೇಹವನ್ನು ಹುರಿಗೊಳಿಸುವ ನಟರು ಅನೇಕರಿದ್ದಾರೆ. ನಮ್ಮಲ್ಲಿ ಕೂಡ ದುನಿಯಾ ವಿಜಯ್, ಧ್ರುವ ಸರ್ಜಾ ಇತ್ಯಾದಿಯವರಿದ್ದಾರೆ. ಅವರಂತೆ ಕಾಣುವ ಬಯಕೆ ನನ್ನಲ್ಲಿತ್ತು ಎನ್ನುತ್ತಾರೆ ಸತೀಶ್.
ದೇಹವನ್ನು ಈ ರೀತಿ ಆಕಾರ ತರಿಸಲು ಸತೀಶ್ ಮೂರು ತಿಂಗಳು ತೆಗೆದುಕೊಂಡರಂತೆ. ಇದರಿಂದ ನನ್ನ ಆತ್ಮವಿಶ್ವಾಸ ಕೂಡ ಹೆಚ್ಚಾಗಿದೆ. ನಾನು ಇನ್ನೂ ಚಿಕ್ಕವನೆಂದು ಕಾಣಿಸುತ್ತೇನೆ. ಮಾರ್ಚ್ ಮೊದಲ ವಾರದವರೆಗೆ ಈ ನೋಟವನ್ನು ಕಾಯ್ದುಕೊಳ್ಳಬೇಕು ಏಕೆಂದರೆ ಮಾರ್ಚ್ ನಲ್ಲಿ ಚಿತ್ರದ ಫೈಟಿಂಗ್ ಸನ್ನಿವೇಶ ಚಿತ್ರೀಕರಣಗೊಳ್ಳಲಿದೆ ಎಂದು ವಿವರ ನೀಡಿದರು.
ಮಹೇಶ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅಯೋಗ್ಯದಲ್ಲಿ ರಚಿತಾ ರಾಮ್ ನಾಯಕಿ. ಅರ್ಜುನ್ ಜನ್ಯ ಅವರ ಸಂಗೀತ,ಪ್ರೀತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.