ಗುರುನಂದನ್ ಹೊಸ ಗೆಟಪ್: ರಾಜು ಜೇಮ್ಸ್ ಬಾಂಡ್
ಬೆಂಗಳೂರು: ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ತಾವು ಡಿಪಿ ರಘುರಾಮ್ ಅವರ ಮಿಸ್ಸಿಂಗ್ ಬಾಯ್ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿದು ಬಳಿಕ ಬೇರೆ ಚಿತ್ರಗಳಿಗೆ ಸಹಿ ಹಾಕುವವರಿದ್ದಾರೆ.
ಇತ್ತೀಚೆಗೆ ಕಾರಣಾಂತರಗಳಿಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರಯೋಜನೆಯಿಂದ ದೂರವಾಗಿದ್ದ ನಟ ಗುರುನಂದನ್ ಇದೀಗ ಸಂಪೂರ್ಣ ಹೊಸಬರ ಚಿತ್ರತಂಡವೊಂದರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.
ಎಕ್ಸ್ ಪ್ರೆಸ್ ಗೆ ದೊರೆತ ಮಾಹಿತಿಯಂತೆ ಗುರುನಂದನ್ ಕಲ್ಬೆಟ್ಟದ ದರೋಡೆಕೋರರು ನಿರ್ದೇಶಕ ದೀಪಕ್ ಮದುವನಹಳ್ಳಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.
ಪಂಜಾಬ್ ನಲ್ಲಿ ನಡೆದಿದ್ದ ಒಂದು ನೈಜ ಘಟನೆಯಿಂದ ಪ್ರೇರಣೆ ಹೊಂದಿ ನವೀನ ಥ್ರಿಲ್ಲರ್, ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ನಿರ್ಮಿಸುತ್ತಿರುವ ದೀಪಕ್ ಇದಕ್ಕೆ ಚಿತ್ರಕಥೆ, ಸಂಬಾಷಣೆ ಬರೆದಿದ್ದಾರೆ. ಇದೊಂದು ಬ್ಯಾಂಕ್ ರಾಬರಿ ಕಥೆಯಾಗಿದ್ದು ಕನ್ನಡದ ಸೊಗಡಿಗೆ ಸರಿಯಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಇನ್ನು ಇಲ್ಲಿ ಸಹ ಗುರುನಂದನ್ ತಮ್ಮ ’ರಾಜು’ ಎನ್ನುವ ಫೆವರಿಟ್ ಹೆಸರನ್ನೇ ಹೊಂದಲಿದ್ದು ಒಂದು ಮೂಲದ ಪ್ರಕಾರ ಚಿತ್ರಕ್ಕೆ ’ರಾಜು, ಜೇಮ್ಸ್ ಬಾಂಡ್’ ಎಂದು ನಾಮಕರಣ ಮಾಡಲಾಗುತ್ತಿದೆ. ಆದರೆ ಇದುಅವರ ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿದೆ ಎಂದು ಮೂಲಗಳು ತಿಳಿಸಿದೆ.
ಗುರುನಂದನ್ ಅವರ ಎನ್ ಆರ್ ಐ ಸ್ನೇಹಿತರೊಬ್ಬರು ಈ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದು ಮನೋಹರ ಜೋಶಿ ಛಾಯಾಗ್ರಹಣ ನೆರವೇರಿಸಲಿದ್ದಾರೆ. ಚಿತ್ರಕ್ಕೆ ಸಂಗೀತ ನಿರ್ದೇಶಕರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ.