ಸಿನಿಮಾ ಸುದ್ದಿ

ಮತ್ತೆ ಇತಿಹಾಸ ನಿರ್ಮಿಸಿದ 'ನಾಗರಹಾವು'; ಹೌಸ್ ಫುಲ್ ಪ್ರದರ್ಶನ

Sumana Upadhyaya

ಬೆಂಗಳೂರು: ಕನ್ನಡ ಚಿತ್ರರಂಗದ ಅತ್ಯುತ್ಕ್ರಷ್ಟ ಸಿನಿಮಾ ಎಂದು ಕರೆಯಲ್ಪಡುವ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ನಾಗರಹಾವು' ಸಿನಿಮಾ ಜನರ ಮನಸ್ಸನ್ನು ಗೆದ್ದಿರುವುದು ಹಳೆ ಸುದ್ದಿ.

1972ರಲ್ಲಿ ತೆರೆಕಂಡಿದ್ದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರ ಸಿನಿಮಾವನ್ನು ಇದೀಗ ಹೊಸ ಮತ್ತು ಸುಧಾರಿತ ಡಿಜಿಟಲ್ ಮಾದರಿಯಲ್ಲಿ ಸಿನಿಮಾಸ್ಕೋಪ್ ಮೂಲಕ 7.1 ಸೌಂಡ್ ಟೆಕ್ನಾಲಜಿಯೊಂದಿಗೆ ಮೊನ್ನೆ 20ರಂದು ಮರು ಬಿಡುಗಡೆಯಾಯಿತು. ಇದೀಗ ಮತ್ತೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ವಿಶೇಷ.

ಚಿತ್ರದಲ್ಲಿ ವಿದ್ಯಾರ್ಥಿ ಪಾತ್ರ ಮಾಡಿರುವ ವಿಷ್ಣುವರ್ಧನ್ ಅವರ ರಾಮಚಾರಿ, ಅವರ ಗುರುಗಳಾದ ಚಾಮಯ್ಯ ಮೇಷ್ಟ್ರ ನಡುವಿನ ಬಾಂಧವ್ಯ ಚಿತ್ರಪ್ರೇಮಿಗಳಿಗೆ ಇಷ್ಟವಾಗಿತ್ತು.ಕೋಪಿಷ್ಟ ಯುವಕನ ಪಾತ್ರದಲ್ಲಿ ವಿಷ್ಣುವರ್ಧನ್ ಅವರು ಪ್ರೇಕ್ಷಕರ ಮನಸೂರೆಗೊಂಡು ರಾತ್ರೋರಾತ್ರಿ ಕನ್ನಡದ ಸೂಪರ್ ಸ್ಟಾರ್ ಆದರು. ಚಿತ್ರರಲ್ಲಿ ವಿಲನ್ ಪಾತ್ರ ಮಾಡಿದ ಅಂಬರೀಷ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಚಾಮಯ್ಯ ಮೇಷ್ಟ್ರ ಪಾತ್ರದಲ್ಲಿ ಅಶ್ವಥ್ ಅವರ ಪಾತ್ರ ಅದ್ಭುತವಾಗಿದೆ.

ಈ ಚಿತ್ರ ತೆರೆಕಂಡು 45 ವರ್ಷಗಳು ಸಂದಿವೆ, ಆದರೂ ಅದರ ಮೇಲಿನ ಪ್ರೀತಿ ಕನ್ನಡ ಪ್ರೇಕ್ಷಕರಿಗೆ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಕಳೆದ ಶುಕ್ರವಾರ ಮರು ತೆರೆಕಂಡು ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು. ಹಲವು ಥಿಯೇಟರ್ ಗಳಲ್ಲಿ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿದ್ದರೆ, ಸಿಂಗಲ್ ಥಿಯೇಟರ್ ನಲ್ಲಿ ಕಳೆದ ಶುಕ್ರವಾರ ಬೆಳಗ್ಗೆ 6 ಗಂಟೆಗೆ ವಿಶೇಷ ಪ್ರದರ್ಶನ ಕಂಡಿತ್ತು.

ಚಿತ್ರ ರಾಜ್ಯದ 180 ಥಿಯೇಟರ್ ಗಳಲ್ಲಿ ತೆರೆಕಂಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನಗಳನ್ನು ಹೆಚ್ಚು ಮಾಡಲಾಗಿದೆ. ಆರಂಭದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ 2 ಶೋ ನಡೆಸಲಾಗುತ್ತಿತ್ತು. ನಂತರ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಕಂಡು ಪ್ರದರ್ಶನವನ್ನು ಹೆಚ್ಚು ಮಾಡಲಾಗಿದೆ. ಬೆಂಗಳೂರಿನ ಚಂದ್ರೋದಯ, ವೈಭವ ಚಿತ್ರಮಂದಿರಗಳಲ್ಲಿ ಕೂಡ ಪ್ರದರ್ಶನವಾಗುತ್ತಿದೆ. ಒರಾಯನ್ ಮಾಲ್, ಜಿಟಿ ಮಾಲ್, ಗೋಪಾಲನ್ ಮಾಲ್ ಗಳಲ್ಲಿ ಕೂಡ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ ಎನ್ನುತ್ತಾರೆ ಚಿತ್ರದ ವಿತರಕ ಕಾರ್ತಿಕ್ ಗೌಡ.

ಕನ್ನಡದ ಹೆಸರಾಂತ ನಿರ್ಮಾಪಕರಾಗಿದ್ದ ಎನ್ ವೀರಸ್ವಾಮಿಯವರ ಕಿರಿಯ ಪುತ್ರ, ಖ್ಯಾತ ನಟ ರವಿಚಂದ್ರನ್ ಸೋದರ ಎನ್ ಬಾಲಾಜಿ ಅವರು ಈಶ್ವರಿ ಪ್ರೊಡಕ್ಷನ್ ನಡಿ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಮಾಡಿದ್ದಾರೆ. ಕೆಆರ್ ಜಿ ಸ್ಟುಡಿಯೊದಡಿ ಕಾರ್ತಿಕ್ ಗೌಡ ವಿತರಣೆ ಮಾಡಿದ್ದಾರೆ.

SCROLL FOR NEXT