ಸಿನಿಮಾ ಸುದ್ದಿ

ಕರ್ನಾಟಕದಲ್ಲಿ ರಜನಿಕಾಂತ್ 'ಕಾಳಾ' ಬಿಡುಗಡೆ ಇಲ್ಲ: ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು

Srinivasamurthy VN
ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಳಾ' ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.
ಕಾವೇರಿ ವಿಚಾರವಾಗಿ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಜನಿಕಾಂತ್ ಗೆ ಮೊದಲ ಬಿಸಿ ತಟ್ಟಿದ್ದು, ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗೆಡೆಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಈ ಬಗ್ಗೆ ಮಾತನಾಡಿರುವ ಸಾರಾಗೋವಿಂದು ಅವರು, ರಜನಿಕಾಂತ್ ಅವರು ಕಾವೇರಿ ವಿಚಾರವಾಗಿ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವಂತೆ ಹೇಳಿಕೆ ನೀಡಿದ್ದಾರೆ. ರಜನಿಕಾಂತ್ ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸಾರಾಗೋವಿಂದು ರಜನಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿರುವ ಯಾವುದೇ ವಿತರಕರೂ ಕೂಡ ರಜನಿಕಾಂತ್ ಅಭಿನಯದ ಕಾಳಾ ಚಿತ್ರ ವಿತರಣೆಗೆ ಮುಂದಾಗಿಲ್ಲ. ಹೀಗಾಗಿ ಕಾಳಾ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಸಾರಾಗೋವಿಂದು ಹೇಳಿದ್ದಾರೆ.
ನಿನ್ನೆಯಷ್ಟೇ ಕಾಳ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿತ್ತು. ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 3 ಲಕ್ಷಕ್ಕೂ ಅಧಿಕ ಜನ ಈ ಟ್ರೇಲರ್ ವೀಕ್ಷಣೆ ಮಾಡಿದ್ದರು. ಚಿತ್ರದಲ್ಲಿ ಹಿಂದುಳಿದವರ ವರ್ಗದ ನಾಯಕನಾಗಿ ರಜನಿಕಾಂತ್ ಮಿಂಚಿದ್ದು, ನಾನಾ ಪಾಟೇಕರ್ ಪ್ರಮುಖಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 
ಚಿತ್ರರಂಗದಿಂದ ರಾಜಕೀಯದತ್ತ ಮುಖ ಮಾಡಿರುವ ರಜನಿಕಾಂತ್, ಕಾಳ ಚಿತ್ರದ ಮೂಲಕ ಮತ್ತೆ ಜನರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ರಾಜಕೀಯದ ಎಳೆ ಇದ್ದು, ರಗಡ್ ಲುಕ್ ನಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಕೇವಲ ಒಂದೂವರೆ ನಿಮಿಷದ ಟ್ರೇಲರ್ ನಲ್ಲೇ ನಿರ್ದೇಶಕ ಪಾ.ರಂಜಿತ್ ರಜನಿಕಾಂತ್ ಅವರ ಪಾತ್ರವನ್ನು ಸೂಕ್ಷ್ಮವಾಗಿ ತೋರಿಸಿಕೊಟ್ಟಿದ್ದು, ಚಿತ್ರದ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 
ಇನ್ನು ಚಿತ್ರದಲ್ಲಿ ಹುಮಾ ಖುರೇಷಿ, ಈಶ್ವರಿ ರಾವ್​ ಮತ್ತು ಖ್ಯಾತ ನಟ, ನಿರ್ದೇಶಕ ಸಮುದ್ರ ಕಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 
SCROLL FOR NEXT