ಬೆಂಗಳೂರು: ಇದಾಗಲೇ ರಿಯಲ್ ಸ್ಟಾರ್ ಉಪೇಂದ್ರ ಕೈಯಲ್ಲಿ ಸಾಕಷ್ಟು ಚಿತ್ರಗಳಿದೆ. ಅಲ್ಲದೆ ರಾಜಕಾರಣದಲ್ಲಿ ಸಹ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಈಗ ಅವರು ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು "ಒಕೆ" ಎಂದಿದ್ದಾರೆ ಎಂಬ ಸುದ್ದಿ ಬಂದಿದೆ. ಅದೂ ಸಹ ಹೊಸ ನಿರ್ದೇಶಕನ ಚೊಚ್ಚಲ ಚಿತ್ರದಲ್ಲಿ ಉಪ್ಪಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.
ಮೌರ್ಯ ಡಿಎನ್ ಸ್ಯಾಂಡಲ್ ವುಡ್ ಗೆ ನಿರ್ದೇಶಕರಾಗಿ ಕಾಲಿಡುತ್ತಿರುವ ಹೊಸ ಪ್ರತಿಭೆ. ಇನ್ನೂ ಹೆಸರಿಡದ ಇವರ ಚಿತ್ರದಲ್ಲಿ ಉಪೇಂದ್ರ ಅಭಿನಯಿಸಲಿದ್ದು ಕ್ರಿಸ್ಟಲ್ ಪಾರ್ಕ್ ಸಿನಿಮಾ ಹಾಗೂ ಟಿಆರ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.
ಮೌರ್ಯ ಪಾಲಿಗೆ ಇದು ಹೊಸ ಪ್ರಯತ್ನ. ಚೊಚ್ಚಲ ಪ್ರಯತ್ನದಲ್ಲೇ ಕಮರ್ಷಿಯಲ್ ಚಿತ್ರವೊಂದರ ನಿರ್ದೇಶನಕ್ಕಿಳಿದಿರುವ ಇವರ ಚಿತ್ರವು ಮೂರು ಆಯಾಮಗಳ ಕಥೆಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೆ ಚಿತ್ರದಲ್ಲಿ ತತ್ವಶಾಸ್ತ್ರದ ಸಂಯೋಜನೆಯೂ ಉಂಟು. "ನಿರ್ದೇಶಕ ಹಾಗೂ ನಟರಾಗಿ ಉಪೇಂದ್ರ ಯಾವಾಗಲೂ ವಿಶಿಷ್ಟ ಕಥೆ, ಪಾತ್ರಗಳನ್ನು ಸೃಷ್ಟಿಸಲು ನೋಡುತ್ತಾರೆ.ಹಾಗಾಗಿ ಸೂಕ್ಷ್ಮ ಚಿಂತನೆಯ ತತ್ವ ವಿಚಾರವನ್ನೂ ಉಳ್ಳ ಇಂತಹಾ ಪಾತ್ರಗಳನ್ನು ಉಪೇಂದ್ರ ಅವರಂತಹಾ ನಟರಿಂದ ಮಾತ್ರ ನಿಭಾಯ್ತಿಸಲು ಸಾಧ್ಯ." ನಿರ್ದೇಶಕ ಹೇಳಿದ್ದಾರೆ.
ಚಿತ್ರದ ಪಾತ್ರಕ್ಕಾಗಿ ನಟ, ನಟಿಯರ ಆಯ್ಕೆ ಇನ್ನಷ್ಟೇ ಆಗಬೇಕಿದ್ದು ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಅಂದಹ್ಗಾಗೆ ನಿರ್ದೇಸಕರು ಈ ಚಿತ್ರದ ಕಥೆಯನ್ನು ಕಳೆದ ಒಂದೂವರೆ ವರ್ಷಗಳಿಂದ ಸಿದ್ದಪಡಿಸುತ್ತಿದ್ದರು. ಅದೂ ಸಹ ನಟ ಉಪೇಂದ್ರ ಅವರನ್ನು ಪಾತ್ರವನ್ನಾಗಿ ಕಲ್ಪಿಸಿಕೊಂಡೇ ಈ ತಯಾರಿ ನಡೆದಿತ್ತು ಎನ್ನುವುದು ಗಮನಾರ್ಹ. ಅವರು ಉಪೇಂದ್ರ ಅವರ ಚಿತ್ರಗಳನ್ನು ನೋಡಿದ್ದು ಅವರನ್ನು ರೋಲ್ ಮಾಡೆಲ್ ಆಗಿಸಿಕೊಂಡಿದ್ದರು. ಇದೀಗ ಉಪ್ಪಿಯನ್ನೇ ನಾಯಕನನ್ನಾಗಿ ಮಾಡಿ ಚಿತ್ರ ನಿರ್ದೇಶಿಸಲು ಹೊರಟಿರುವುದು ಅವರ ಕನಸನ್ನು ನನಸಾಗಿಸುವ ಸಮಯ ಇದಾಗಿದೆ ಎಂದು ಅವರು ಹೇಳುತ್ತಾರೆ.
ಉಪೇಂದ್ರ ಅವರಂತಹ ನಟ, ತಂತ್ರಜ್ಞರಿಗಾಗಿ ಕಥಾವಸ್ತುವನ್ನು ತಯಾರಿಸುವುದು ಒಂದು ಸವಾಲು ಎನ್ನುತ್ತಾರೆ ಮೌರ್ಯ. ಇನ್ನು ಉಪೇಂದ್ರ ಇದಾಗಲೇ "ಹೋಂ ಮಿನಿಸ್ಟರ್", "ಐ ಲವ್ ಯೂ" ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಶಶಾಂಕ್ ಅವರ ಜತೆಗಿನ ಒಂದು ಯೋಜನೆಗೆ ಸಹ ಸಹಿ ಹಾಕಿದ್ದಾರೆ. ಆ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಮಾರ್ಚ್ ಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಇಷ್ಟೆಲ್ಲದರ ನಡುವೆ ಉಪೇಂದ್ರ ಇದೀಊಗ ಹೊಸ ನಿರ್ದೇಶಕರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ ಸಂಗತಿಯಾಗಿದೆ.