ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಮೀಟೂ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ನಟ ಅರ್ಜುನ್ ಸರ್ಜಾ ಪರ ನಿಂತಿದ್ದ ನಟಿ ಹರ್ಷಿಕಾ ಪೂಣಚ್ಛ ಇದೀಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಪ್ರಸ್ತುತ #MeToo ಆರೋಪ ಮಾಡುತ್ತಿರುವರು ಈ ಹಿಂದೆ ಅವಕಾಶಕ್ಕಾಗಿ ಖ್ಯಾತನಾಮರೊಂದಿಗೆ ಅರೆಬೆತ್ತಲಾಗಿ ಕುಳಿತಿದ್ದರು ಎಂದು ಹರ್ಷಿಕಾ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಸುಧೀರ್ಘವಾಗಿ ಬರೆದಿರುವ ಹರ್ಷಿಕಾ, 'ನಾನು ಈಗ ನಡೆಯುತ್ತಿರುವ ಮೀಟೂ ಅಭಿಯಾನದ ಬಗ್ಗೆ ನೋಡುತ್ತಿದ್ದೇನೆ. ನಾನು ಒಂದು ಸದೃಢ ಮಹಿಳೆಯಾಗಿ ನಾನು ಚಿತ್ರರಂಗವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ಗೌರವ ನೀಡುವುದು ಸರಿ. ಆದರೆ ಕೆಲವು ನಟಿಯರು ತಮ್ಮ ಫೆಮಿನಿಟಿ ಬಳಸಿ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಪಬ್ಲಿಸಿಟಿ ಪಡೆಯುವುದು ಒಳ್ಳೆಯದು. ಆದರೆ ಅದಕ್ಕೆ ಒಂದು ಮಿತಿ ಇರುತ್ತದೆ. ಒಬ್ಬರ ಕುಟುಂಬ ಒಡೆದು, ಅವರ ಪತ್ನಿ, ಮಕ್ಕಳಿಗೆ ನಾಚಿಕೆಯಾಗುವಂತೆ ಮಾಡುತ್ತಾರೆ. 15-20 ವರ್ಷದಿಂದ ಆ ನಟರು ಚಿತ್ರರಂಗದಲ್ಲಿ ಕಷ್ಟಪಟ್ಟು ಸಂಪಾದಿಸಿದ್ದ ಹೆಸರನ್ನು ಕ್ಷಣಮಾತ್ರದಲ್ಲಿ ಒಂದು ಹೇಳಿಕೆ ಮೂಲಕ ಹಾಳು ಮಾಡುತ್ತಾರೆ ' ಎಂದು ಹೇಳಿದ್ದಾರೆ.
ಅಲ್ಲದೆ, 'ನಾನು 10 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ. ನನ್ನ ಕಣ್ಣಿನಿಂದ ನಾನು ಎಲ್ಲವನ್ನೂ ನೋಡಿದ್ದೇನೆ. ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ಮೇಲೆ ಬರಲು ಏನು ಬೇಕಾದರು ಮಾಡುತ್ತಾರೆ. ಪುರುಷರಿಗೆ ಎಲ್ಲ ಸ್ವಾತ್ರಂತ್ಯ ಕೊಟ್ಟು ಅವರ ಜೊತೆ ನಗುತ್ತಾ, ಸಲುಗೆಯಿಂದ ತಿರುಗಾಡುತ್ತಾರೆ. ನಂತರ ಪಬ್ಲಿಸಿಟಿಗಾಗಿ ಅವರ ಮೇಲೆ ಆರೋಪ ಮಾಡುತ್ತಾರೆ. ಆರೋಪ ಮಾಡುವ ನಟಿಯರು ಈ ಹಿಂದೆ ಗಾಂಜಾ ಸೇವಿಸಿ, ವಿದೇಶದಲ್ಲಿ ಹಾಡಿನ ಶೂಟಿಂಗ್ ಇದ್ದಾಗ ನಟ ಅಥವಾ ಖ್ಯಾತ ವ್ಯಕ್ತಿ ಮೈಮೇಲೆ ಬೀಳುವುದ್ದನ್ನು ನಾನು ಸ್ವತಃ ನೋಡಿದ್ದೇನೆ. ಕೆಲವು ವಿಷಯಗಳನ್ನು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ'.
'ಚಿತ್ರರಂಗದಲ್ಲಿ ಹೆಸರು ಮಾಡುವವರೆಗೂ ಅವರು ಏನೂ ಮಾಡಿದರು ನಿಮಗೆ ಸರಿ ಎಂದು ಎನಿಸುತಿತ್ತು. ಚಿತ್ರರಂಗದಲ್ಲಿ ಹೆಸರು ಮಾಡಿದ ಮೇಲೆ ಇನ್ನಷ್ಟು ಯಶಸ್ಸಿಗಾಗಿ ನೀವು ಅವರ ಮೇಲೆ ಆರೋಪ ಮಾಡುತ್ತೀರಿ. ಕೆಲ ವರ್ಷಗಳ ಹಿಂದೆ ಈ ರೀತಿ ನಡೆಯುವಾಗ ನಿಮಗೆ ಮೀಟೂ ಏನಾಗಿತ್ತು. ಆ ಸಮಯದಲ್ಲಿ ನಿಮಗೆ ಇದೆಲ್ಲ ಸರಿ ಅನ್ನಿಸಿತ್ತು. ಆದರೆ ಈಗ ನಿಮಗೆ ಮಹಿಳೆಯರನ್ನು ಈ ಪುರುಷರಿಂದ ರಕ್ಷಿಸಬೇಕು ಎಂದು ಅನಿಸುತ್ತಿದ್ದೆ ಅಲ್ವಾ. ನಾನ್ಸೆನ್ಸ್, ಇದು ಅಟ್ಟರ್ ನಾನ್ಸೆನ್ಸ್' ಎಂದು ಹರ್ಷಿಕಾ ಪೋಸ್ಟ್ ಮಾಡಿದ್ದಾರೆ.
ಅಂತೆಯೇ ತಮ್ಮ ಪೋಸ್ಟ್ ನಲ್ಲಿ ನಟಿ ಹರ್ಷಿಕಾ, 'ಹೆಸರಾಂತ ನಿರ್ಮಾಪಕರೊಬ್ಬರು ನನಗೆ ಒಂದು ವಿಡಿಯೋವನ್ನು ತೋರಿಸಿದ್ದರು. ಆ ವಿಡಿಯೋದಲ್ಲಿ ಈಗ ಮೀಟೂ ಎಂದು ಅಭಿಯಾನ ಮಾಡುತ್ತಿರುವ ನಟಿಯರು ಖ್ಯಾತ ವ್ಯಕ್ತಿ ಭುಜದ ಮೇಲೆ ಮಲಗಿ ಖುಷಿಯಾಗಿ ಗಾಂಜಾ ಹೊಡೆಯುತ್ತಾ ಇನ್ನೊಬ್ಬರ ಹೆಸರನ್ನು ಹೇಗೆ ಹಾಳು ಮಾಡಬೇಕೆಂದು ಮಾತನಾಡಿರುವುದನ್ನು ನೋಡಿದ್ದೇನೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ಆ ಖ್ಯಾತ ನಟನೇ ಅರ್ಧ ನಗ್ನಳಾಗಿರುವ ನಟಿಯ ವಿಡಿಯೋ ಮಾಡುತ್ತಿರುತ್ತಾರೆ. ಆ ವಿಡಿಯೋದಲ್ಲಿ ನಟಿಯೊಬ್ಬಳು ನಗುತ್ತಾ ನಿನ್ನ ಮುಂದಿನ ಚಿತ್ರದಲ್ಲೂ ನಾನೇ ನಟಿ ಓಕೆನಾ ಎಂದು ಹೇಳುತ್ತಾಳೆ. ನಾನು 10 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ಇದೂವರೆಗೂ ಯಾರೂ ನನ್ನನ್ನು ಬೆರಳು ಮಾಡಿ ತೋರಿಸಲಿಲ್ಲ. ನಾನು ಈಗಲೂ ಕ್ಲೀನ್ ಹಾಗೂ ಪ್ಯೂರ್ ಆಗಿದ್ದೀನಿ. ನಾನು ದೊಡ್ಡ ನಟರ ಜೊತೆ ಹಲವು ಚಿತ್ರಗಳನ್ನು ಮಿಸ್ ಮಾಡಿಕೊಂಡೆ. ಆದರೆ ನಾನು ಈಗ ಖುಷಿಯಾಗಿದ್ದೇನೆ. ಅಲ್ಲದೇ ಎಲ್ಲ ಚಿತ್ರರಂಗದ ಕಲಾವಿದರ ಜೊತೆ ನನ್ನ ಬಾಂಧವ್ಯ ಚೆನ್ನಾಗಿದೆ.
'ನಾನು ಈಗ ಹೇಳಿರುವುದನ್ನು ಕೆಲವರು ವಿರೋಧಿಸಬಹುದು. ಆದರೆ ಇದು ನಿಜ. ಕೆಲವು ಪುರುಷರು ಕೆಟ್ಟವರು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು ನಿಮ್ಮನ್ನು ರೇಪ್ ಮಾಡುವುದಿಲ್ಲ. ನೀವು ಧೈರ್ಯವಾಗಿ ಇಲ್ಲ ಎಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗುತ್ತದೆ. ಈಗ ಪುರುಷರು #ವಿಟೂ ಮಾಡುವ ಸಮಯ. ಏಕೆಂದರೆ ಸಾಕಷ್ಟು ನಟಿಯರು ಹೆಸರು ಪಡೆಯಲು ಖ್ಯಾತ ವ್ಯಕ್ತಿಗಳನ್ನು ಬಳಸಿಕೊಂಡಿದ್ದಾರೆ. ಅವರಿಗೆ ಬೇಕಾಗಿದ್ದು ಸಿಕ್ಕಿದ ನಂತರ ಅವರನ್ನು ದೂರ ತಳ್ಳಿ ಅವರ ಮೇಲೆಯೇ ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹರ್ಷಿಕಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics