ಸಿನಿಮಾ ಸುದ್ದಿ

ಸಾಹಸ ಸಿಂಹ ಡಾ.ವಿಷ್ಣುವರ್ಧನ್ 68ನೇ ಹುಟ್ಟುಹಬ್ಬ; ಇನ್ನೂ ಬಗೆಹರಿಯದ ಸ್ಮಾರಕ ವಿವಾದ

Sumana Upadhyaya

ಬೆಂಗಳೂರು:ಸಾಹಸ ಸಿಂಹ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಂಗಳವಾರ ರಾಜ್ಯಾದ್ಯಂತ ಅವರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

ಡಾ ವಿಷ್ಣುವರ್ಧನ್ ಜನ್ಮದಿನಾಚರಣೆ ಅಂಗವಾಗಿ ವಿಷ್ಣುಸೇನಾ ಸಮಿತಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವವನ್ನು ಬೆಂಗಳೂರಿನ ವಿವಿ ಪುರದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.

ಈಗಾಗಲೇ ಮೂರು ದಿನಗಳಿಂದ ಬೆಂಗಳೂರಿನಲ್ಲಿ ವಿಷ್ಣು ಸೇನಾ ಸಮಿತಿ ಡಾ.ವಿಷ್ಣು ವರ್ಧನ್‌ ರಾಷ್ಟ್ರೀಯ ಉತ್ಸವವನ್ನು ಆಯೋಜನೆ ಮಾಡಿದೆ. ಅಲ್ಲದೇ, ವಿಷ್ಣುವರ್ಧನ್‌ ಅಳಿಯ ಅನಿರುದ್ಧ ನಿರ್ದೇಶನದಲ್ಲಿ ತಯಾರಾದ ಕಿರುಚಿತ್ರಗಳ ಪ್ರದರ್ಶನ ಕೂಡ ಇಂದು ಏರ್ಪಡಿಸಲಾಗಿದೆ.

ಮುಂಜಾನೆ ಅಭಿಮಾನ್‌ ಸ್ಟುಡಿಯೋದಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದು, ಕೇಕ್‌ ಕತ್ತರಿಸುವ ಮೂಲಕ ಹುಟ್ಟು ಹಬ್ಬಕ್ಕೆ ಚಾಲನೆ ನೀಡಲಾಗುತ್ತಿದೆ. ಇನ್ನೊಂದಡೆ ಸೋಮವಾರ ಸಂಜೆಯೇ ವಿಷ್ಣು ಅವರ ಸ್ಮಾರಕವನ್ನು ಅಭಿಮಾನಿಗಳು ಹೂಗಳಿಂದ ಅಲಂಕರಿಸಲಾಗಿದೆ. ಆದರೆ, ವಿಷ್ಣು ಕುಟುಂಬ ಮಾತ್ರ ಮನೆಯಲ್ಲೇ ಆಚರಿಸಲು ನಿರ್ಧರಿಸಿದೆ.

ವಿಷ್ಣುವರ್ಧನ್ ಅವರು ಕೇವಲ ನಟರಾಗಿರದೆ ಗಾಯಕ ಹಾಗೂ ನಿರ್ಮಾಪಕರು ಕೂಡ ಆಗಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಡಾ ವಿಷ್ಣುವರ್ಧನ್ ಅವರು ತೀರಿಕೊಂಡು 9 ವರ್ಷವಾದರೂ ಕೂಡ ಅವರ ಸ್ಮಾರಕವನ್ನು ಇನ್ನೂ ಸರ್ಕಾರ ನಿರ್ಮಾಣ ಮಾಡದಿರುವುದು ಅವರ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿದೆ. ಸ್ಮಾರಕ ಕುರಿತಾದ ತಿಕ್ಕಾಟಕ್ಕೆ ಕೆಲವು ಕಾಣದ ಕೈಗಳು ಕಾರಣ ಎಂದು ಇತ್ತೀಚೆಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ ಅನಿರುದ್ಧ ಆರೋಪಿಸಿದ್ದಾರೆ.

ಈ ವರ್ಷ, ಮುಂದಿನ ವರ್ಷ ಅಂತ ಹೇಳುತ್ತಲೇ ಒಂಭತ್ತು ವರ್ಷ ಆಗೋಯ್ತು. ತಾಳ್ಮೆ ಅನ್ನೋದು ಎಲ್ಲಿಯವರೆಗೆ ಇರುತ್ತೆ. ನೋಡೋಣ, ಹತ್ತನೇ ವರ್ಷದ ಒಳಗೆ ಆಗದೇ ಇದ್ದರೆ, ಬೇಕಾಗಿಲ್ಲ. ಇಷ್ಟರಲ್ಲೇ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಭಾರತಿ ವಿಷ್ಣುವರ್ಧನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರ ಅಳಿಯ ಅನಿರುದ್ಧ್, ಇದುವರೆಗೆ 6 ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ, ಆದರೆ ಸ್ಮಾರಕ ಬಗ್ಗೆ ಸ್ಪಷ್ಟ ಅಭಿಪ್ರಾಯ ಕೇಳಿಬಂದಿಲ್ಲ. ಕಾಣದ ಕೈಗಳಿಂದ ಸ್ಮಾರಕಕ್ಕೆ ಅಡ್ಡಿಯಾಗಿದೆ. ಆ ಕೈಗಳು ಯಾವುವು ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಕನ್ನಡದ ಮತ್ತೊಬ್ಬ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಶೃತಿ ಕೂಡ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

SCROLL FOR NEXT