ಸಿನಿಮಾ ಸುದ್ದಿ

ನಡು ರಸ್ತೆಯಲ್ಲೇ ಹಲ್ಲೆ; ಪ್ರಕರಣದ ಕುರಿತು ನಟ ಕೋಮಲ್ ಹೇಳಿದ್ದೇನು?

Srinivasamurthy VN

ಬೆಂಗಳೂರು: ನಡು ರಸ್ತೆಯಲ್ಲಿ ನಟ ಕೋಮಲ್ ಕುಮಾರ್ ಅವರ ಮೇಲಿನ ಹಲ್ಲೆ ವಿಚಾರ ಇದೀಗ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ನಟ ಕೋಮಲ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಟ ಕೋಮಲ್, 'ಅವರು ಯಾರು? ನನ್ನ ಮೇಲೆ ಏಕೆ ಹಲ್ಲೆ ಮಾಡಿದರು? ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ನಾನು ಸಿನಿಮಾ ಮಾಡುವುದೇ ತಪ್ಪಾ ಎಂದು ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.

'ಅವರು ಯಾರು ಎಂಬುದು ನನಗೆ ಗೊತ್ತಿಲ್ಲ. ನನ್ನ ಮಗಳನ್ನು ಟ್ಯೂಷನ್ ​ಗೆ ಬಿಟ್ಟು ವಾಪಸು ಬರುವಾಗ ಏಕಾಏಕಿ ಒಬ್ಬ ದ್ವಿಚಕ್ರ ವಾಹನದಿಂದ ಹಿಂದೆ ಬಂದು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದಿಸಿದ. ಅದನ್ನು ನಾನು ಪ್ರಶ್ನಿಸಿದೆ. ಮತ್ತಷ್ಟು ಜೋರಾಗಿ ಮಾತನಾಡಿದ. ಅದನ್ನು ಕೇಳಿ ನಾನು ಕಾರಿನಿಂದ ಕೆಳಗೆ ಇಳಿದೆ. ಇಳಿದ ತಕ್ಷಣ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದರು. ಆಗ ಪಕ್ಕದಲ್ಲಿದ್ದ ಜನ ಅವರನ್ನು ಹಿಡಿದುಕೊಂಡರು. ಅಲ್ಲೇ ಪೊಲೀಸರು ಇದ್ದರು. ಬಳಿಕ ಠಾಣೆಗೆ ಕರೆದು ತಂದರು ಎಂದು ಕೋಮಲ್ ಹೇಳಿದ್ದಾರೆ.

ಪ್ರಕರಣದ ಕುರಿತಂತೆ ನನಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ನಾನು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಅವರು ಯಾರೆಂದು ನನಗೆ ಗೊತ್ತಿಲ್ಲ. ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದರು. ಅವರ ಉದ್ದೇಶ ಏನು ಎಂಬುದು ನನಗೂ ಗೊತ್ತಿಲ್ಲ. ಕೆಂಪೇಗೌಡ-2 ಚಿತ್ರ ಬಿಡುಗಡೆಯಾದಾಗಿನಿಂದ ನನಗೆ ನಾನಾ ರೀತಿಯ ಒತ್ತಡಗಳಿವೆ. ಏನು ಮಾಡಬೇಕೆಂಬುದು ನನಗೂ ಗೊತ್ತಿಲ್ಲ. ಸಿನಿಮಾ ಮಾಡುವುದೇ ತಪ್ಪು ಎಂದು ನನಗೆ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಯಾರ ಮೇಲೆಯೂ ಶಂಕೆ ವ್ಯಕ್ತಪಡಿಸಲು ಹೋಗುವುದಿಲ್ಲ. ದೇವರು ಅಂತಾ ಒಬ್ಬ ಇದ್ದಾನೆ, ಅವನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ದೂರು ದಾಖಲಿಸಿದ್ದೇನೆ. ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಹೇಗಾಯ್ತು ಘಟನೆ
ಇಂದು ಸಂಜೆ ನಗರದ ಸಂಪಿಗೆ ಚಿತ್ರಮಂದಿರದ ರೈಲ್ವೇ ಅಂಡರ್ ಪಾಸ್ ಬಳಿ‌ ದಾರಿ ಬಿಡುವ ವಿಚಾರಕ್ಕೆ ಯುವಕ ಮತ್ತು ಕೋಮಲ್​ ನಡುವೆ ಗಲಾಟೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಯುವಕ ಕೋಮಲ್​ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಮಲ್​ ಕೂಡ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಕೋಮಲ್​ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದು ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT