ಸಿನಿಮಾ ಸುದ್ದಿ

ಶೂನ್ಯ ಬಜೆಟ್ ನಲ್ಲಿ ತಯಾರಾದ 'ಮದುವೆ ಊಟ'

Sumana Upadhyaya

ಭಾರತದ ಸಿನಿಮಾ ಇತಿಹಾಸದಲ್ಲಿಯೇ ಕನ್ನಡದ ಮದುವೆ ಊಟ ಸಿನಿಮಾ ಶೂನ್ಯ ಬಜೆಟ್ ನಲ್ಲಿ ತಯಾರಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ನಿರ್ದೇಶಕ ಮಹೇಶ್ ಲೊನಿ ಹೇಳುತ್ತಾರೆ.


ರೊಮ್ಯಾಂಟಿಕ್-ಕಾಮಿಡಿ ಚಿತ್ರವಾದ ಮದುವೆ ಊಟದಲ್ಲಿ ಬಹುತೇಕ ಹೊಸ ಕಲಾವಿದರೇ ಇದ್ದಾರೆ. ಮನುಷ್ಯನಲ್ಲಿರುವ ಸಂಶಯಾತ್ಮಕ ಸ್ವಭಾವ, ಭಾವನಾತ್ಮಕ ಅಭದ್ರತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. 


ಇತ್ತೀಚಿನ ವರ್ಷಗಳಲ್ಲಿ ಬಿಗ್ ಬಜೆಟ್ ಸಿನಿಮಾಗಳೇ ಬರುತ್ತಿರುವಾಗ ಶೂನ್ಯ ಬಜೆಟ್ ನಲ್ಲಿ ಹೇಗೆ ತಯಾರಿಸಿದಿರಿ ಎಂದು ಕೇಳಿದ್ದಕ್ಕೆ ಮಹೇಶ್, ಕ್ಯಾಮರಾ ರೆಂಟಲ್ ಹೌಸ್ ನಲ್ಲಿ ಮಾರ್ಕೆಟಿಂಗ್ ಹೆಡ್ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು, ನನಗೆ ಕ್ಯಾಮರಾ ಬೇಕು ಎಂಬ ಷರತ್ತಿನೊಂದಿಗೆ ಕೆಲಸಕ್ಕೆ ಸೇರಿಕೊಂಡೆ. ಹೀಗಾಗಿ ಸಿನಿಮಾಕ್ಕೆ ಉಚಿತವಾಗಿ ಕ್ಯಾಮರಾ ಸಿಕ್ಕಿತು. ನನಗೆ ಸಂಪರ್ಕವಿರುವವರಿಂದ ಚಿತ್ರದ ಕಲಾವಿದರನ್ನು ಆಯ್ಕೆಮಾಡಿಕೊಂಡೆ, ಇಡೀ ಚಿತ್ರ ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲಾಗಿದೆ ಎಂದರು.


ಸಂಚಾರಕ್ಕೆ ಉಚಿತ ಒಲಾ ಕೂಪನ್ ಗಳನ್ನು ಬಳಸಿಕೊಂಡೆ. ಬೆಳಗ್ಗೆ ಮತ್ತು ಸಾಯಂಕಾಲ ಹೊತ್ತು ಬಹುತೇಕ ಶೂಟಿಂಗ್ ಆಗಿರುವುದು. ಹೀಗಾಗಿ ಊಟ-ತಿಂಡಿಯ ಖರ್ಚು ಕೂಡ ಜಾಸ್ತಿಯಾಗಲಿಲ್ಲ. ಮದುವೆ ಊಟ ಚಿತ್ರದ ಫೂಟೇಜ್ ತೋರಿಸಿ ಮನವೊಲಿಸಿ ತಂತ್ರಜ್ಞರು ಉಚಿತವಾಗಿ ಕೆಲಸ ಮಾಡಿಕೊಡುವಂತೆ ನಿರ್ದೇಶಕರು ಮನವೊಲಿಸಿದರಂತೆ. ಸ್ವಲ್ಪ ಸಮಯದವರೆಗೆ ರಾತ್ರಿ ಹೊತ್ತು ಉಚಿತವಾಗಿ ಸ್ಟುಡಿಯೊ ನೀಡಲು ಮಾಲೀಕರು ಒಪ್ಪಿಕೊಂಡರು. ಹೀಗಾಗಿ ಬಹುತೇಕ ಕೆಲದ ರಾತ್ರಿ ಮತ್ತು ಬೆಳಗಿನ ಜಾವ ನಡೆಯುತ್ತಿತ್ತು ಎಂದು ಖರ್ಚಿಲ್ಲದೆ ಸಿನಿಮಾ ತಯಾರಿಸಿದ ಬಗ್ಗೆ ವಿವರಣೆ ಕೊಟ್ಟರು ನಿರ್ದೇಶಕರು.


ಮದುವೆ ಊಟ ಚಿತ್ರದಲ್ಲಿ ಹೊಸ ಪ್ರತಿಭೆಗಳೇ ಇರುವುದು, ಕೆ ಮಧುಸೂದನ್ ಛಾಯಾಗ್ರಹಣ, ರವಿತೇಜ, ವಿಕಾಸ್ ವಶಿಷ್ಠ, ಶ್ರೀಕಾಂತ್ ಅತ್ರೇಯ, ಮಧುಸೂದನ್ ಅವರ ಸಂಗೀತ ಚಿತ್ರಕ್ಕಿದೆ. ಭಗವದ್ಗೀತೆಯ ಸಂಶಯಾತ್ಮ ವಿನಶ್ಯತಿ(ಸಂಶಯ ಸ್ವಭಾವದವರು ತಾವು ಸಂತೋಷವಾಗಿರುವುದಿಲ್ಲ, ಬೇರೆಯವರನ್ನು ಕೂಡ ಸಂತೋಷವಾಗಿರಲು ಬಿಡುವುದಿಲ್ಲ), ಲಿಂಗ ಸಮಾನತೆ ಚಿತ್ರದ ಸಂದೇಶವಾಗಿದೆ ಎಂದರು.ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

SCROLL FOR NEXT