ಸಿನಿಮಾ ಸುದ್ದಿ

ವಿಭಿನ್ನ ನಟನೆಗೆ ರಂಗಭೂಮಿಯೇ ವರದಾನ: ಸಂಚಾರಿ ವಿಜಯ್

Srinivasamurthy VN

ಬೆಂಗಳೂರು: ಮಂಗಳಮುಖಿಯಿಂದ ಹಿಡಿದು ವಿಶೇಷ ಚೇತನ ಹುಡುಗನಂತಹ ವಿಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದಕ್ಕೆ ತಮಗೆ ರಂಗಭೂಮಿಯೇ ವರದಾನ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ತಿಳಿಸಿದ್ದಾರೆ.

"ಯುಎನ್ಐ" ಕನ್ನಡ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ಅವನಲ್ಲ, ಅವಳು' ಚಿತ್ರದಲ್ಲಿ ಮಂಗಳಮುಖಿಯಾಗಿ, ಕೃಷ್ಣ ತುಳಸಿ ಚಿತ್ರದಲ್ಲಿ ಅಂಧನಾಗಿ, 'ಪುಕ್ಸಟ್ಟೆ ಲೈಫ್' ಚಿತ್ರದಲ್ಲಿ ಬೀಗ ರಿಪೇರಿ ಮಾಡುವ ಮುಸ್ಲಿಂ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದಕ್ಕೆ, ರಂಗಭೂಮಿಯಲ್ಲಿದ್ದಾಗ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇ ನನಗೀಗ ವರವಾಗಿದೆ, ಸಹಕಾರಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಚಾಲೆಂಜಿಂಗ್ ಪಾತ್ರಗಳಿದ್ದರೇ, ಶಕ್ತಿ ಮೀರಿ ಆ ಪಾತ್ರಕ್ಕೆ ಜೀವ ತುಂಬಬಹುದು. ನಾನು ಈಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರೂ ಹಿಂದಿನ ರಂಗಭೂಮಿ ದಾರಿ ಮರೆತಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವೊಂದು ಕಲಾವಿದರಿಗೆ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಬೇಕೆಂದರೆ ಅವಕಾಶ ದೊರೆಯುವುದಿಲ್ಲ. ಆದರೆ, ಈ ವಿಷಯದಲ್ಲಿ ನಾನು ಅದೃಷ್ಟಶಾಲಿ. ವಿಭಿನ್ನ ಪಾತ್ರಗಳು ಸಿಗುತ್ತಿರುವುದಕ್ಕೆ ಸಂತಸವಾಗಿದೆ. ಅದರಿಂದ ನನ್ನ ಜವಾಬ್ದಾರಿಯು ಹೆಚ್ಚಾಗಿದೆ ಎಂದು ಹೇಳುತ್ತಾರೆ ವಿಜಯ್‌. ಬಹುಶಃ ನಾವು ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಮಾಡುತ್ತಿರುವ ಚಿತ್ರಗಳೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಿರುವುದಕ್ಕೆ ಕಾರಣವಾಗಿರಬಹುದು ಎಂದು ಪ್ರಶಸ್ತಿ ವಿಜೇತ ಚಿತ್ರಗಳ ಕುರಿತು ಮುಕ್ತವಾಗಿ ಅಭಿಪ್ರಾಯ ತಿಳಿಸಿದರು.

ನಾಲ್ಕು ಜನರಿಗೆ ಚಿತ್ರದ ಮೂಲಕ ಉತ್ತಮ ಸಂದೇಶ ರವಾನೆಯಾದರೇ, ಆ ಚಿತ್ರದಲ್ಲಿ ನಟಿಸಿರುವುದಕ್ಕೆ ತಮಗೆ ತೃಪ್ತಿ ಆಗಬೇಕು. ಅಂತಹ ಕಥೆಗಳನ್ನು ಮಾತ್ರ ತಾವು ಆಯ್ಕೆ ಮಾಡುಕೊಳ್ಳುತ್ತಿರುವುದಾಗಿ ಸಂಚಾರಿ ತಮ್ಮ ಸಿನಿ ಯಶಸ್ವಿನ ಹಿಂದಿರುವ ಗುಟ್ಟನ್ನು ಮುಕ್ತವಾಗಿ ತಿಳಿಸಿದರು.

ಇನ್ನು ಮೇಲೊಬ್ಬ ಮಾಯಾವಿ ಚಿತ್ರದ ಕುರಿತು ಮಾತನಾಡಿದ ಅವರು, ಇದೊಂದು ಕರಾವಳಿ ತೀರದಲ್ಲಿ ನಡೆಯುತ್ತಿದ್ದ ಬಹುದೊಡ್ಡ ಮಾಫಿಯಾ ಚಿತ್ರವಾಗಿದ್ದು, ಇರುವೆ ಎಂಬ ಮುಗ್ಧ ಪಾತ್ರದಲ್ಲಿ ತಾವು ನಟಿಸುತ್ತಿದ್ದೇನೆ. ಈ ಇರುವೆಯಲ್ಲಿ ಮುಂದಿನ ಆಗು ಹೋಗುಗಳ ಬಗ್ಗೆ ಮುಂಚಿತವಾಗಿಯೇ ಗ್ರಹಿಸುವ ಶಕ್ತಿ ಇರುತ್ತದೆ. ಇದೊಂದು ಅದ್ಭುತ ಚಿತ್ರ ಎಂದು ವಿವರಿಸಿದರು. ಈಗಾಗಲೇ ತಲೆದಂಡ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರವೇ ಬಿಡುಗಡೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಚಾಲೆಂಜಿಂಗ್ ಪಾತ್ರಗಳಿದ್ದರೆ ನಟ ತನ್ನನ್ನು ತಾನು ಒಡ್ಡಿಕೊಳ್ಳಲು ಹೆಚ್ಚು ಅವಕಾಶ ಸಿಗುತ್ತದೆ, ಹಾಗೆಯೇ ನಮ್ಮ ನಮ್ಮ ಶಕ್ತಿ ಸಾಮರ್ಥ್ಯ ಮೀರಿ ಜೀವ ತುಂಬಲು ಅವಕಾಶವಿರುತ್ತದೆ. ಎಲ್ಲಾ ನಟರಿಗೂ, ಕಲಾವಿದರಿಗೂ ವಿಭಿನ್ನವಾದ ಪಾತ್ರಗಳನ್ನು ಮಾಡಬೇಕೆನ್ನುವ ತುಡಿತ ಇರುತ್ತದೆ. ಆ ವಿಷಯದಲ್ಲಿ ನನಗೆ ಒಳ್ಳೊಳ್ಳೆಯ ಪಾತ್ರಗಳು ಸಿಗುತ್ತಿರುವುದಕ್ಕೆ ಸಂತೋಷವಿದೆ. ಇಲ್ಲವೆಂದರೆ ಏಕತಾನತೆ ಕಾಡುವ ಸಾಧ್ಯತೆಯೇ ಹೆಚ್ಚು ಅವರು ಸಂಚಾರಿ ವಿಜಯ್ ತಮ್ಮ ಮನದಾಳವನ್ನು ತೆರೆದಿಟ್ಟರು.

- ಪುಷ್ಪಲತಾ‌ ಕಾಂಬಳೆ

SCROLL FOR NEXT