ಬಿಗ್'ಬಾಸ್ ಸೀಸನ್ 12ರ ವಿಜೇತೆ ನಟಿ ದೀಪಿಕಾ ಕಾಕರ್
ನವದೆಹಲಿ: ಹಿಂದಿ ಬಿಗ್'ಬಾಸ್ ಸೀಸನ್ 12ರ ವಿಜೇತೆ ನಟಿ ದೀಪಿಕಾ ಕಾಕರ್ ಅವರಿಗೆ ಕ್ರಿಕೆಟಿಗ ಶ್ರೀಶಾಂತ್ ಅವರ ಅಭಿಮಾನಿಯೊಬ್ಬ ಆ್ಯಸಿಡ್ ದಾಳಿ ಬೆದರಿಕೆ ಹಾಕಿದ್ದಾನೆ.
ಸಾಕಷ್ಟು ಕುತೂಹಲಗಳನ್ನು ಮೂಡಿಸಿದ್ದ ಹಿಂದಿ ಬಿಗ್'ಬಾಸ್ ಸೀಸನ್ 12ರಲ್ಲಿ ದೀಪಿಕಾ ಕಾಕರ್ ಅವರು ವಿಜೇತರಾಗಿದ್ದರು. ದೀಪಿಕಾ ಅವರು ವಿಜೇತರಾಗಿರುವ ಕುರಿತು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದೀಪಿಕಾ ಅವರ ಮುಖ ಬಹಿರಂಗೊಂಡಿಲ್ಲ. ಶ್ರೀಶಾಂತ್ ಅವರ ಬೆಂಬಲದಿಂದಷ್ಟೇ ದೀಪಿಕಾ ಅವರು ವಿಜೇತರಾದರು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದಷ್ಟು ಜನರು, ವೋಟ್ ಗಳಿಂದ ವಿಜೇತರನ್ನು ಆಯ್ಕೆ ಮಾಡಲಾಗುತ್ತಿಲ್ಲ. ವಿಜೇತರನ್ನು ಕಾರ್ಯಕ್ರಮ ಆಯೋಜಕರೇ ನಿರ್ಧರಿಸುತ್ತಾರೆಂದು ಹೇಳುತ್ತಿದ್ದಾರೆ.
ಈ ನಡುವೆ ಶ್ರೀಶಾಂತ್ ಅಭಿಮಾನಿಯೊಬ್ಬ ಎಲ್ಲಾ ಮಿತಿಗಳನ್ನು ಮೀರಿ ದೀಪಿಕಾ ಅವರಿಗೆ ಆ್ಯಸಿಡ್ ದಾಳಿ ಬೆದರಿಕೆಯನ್ನು ಹಾಕಿದ್ದಾರೆ.
ಶ್ರೀಶಾಂತ್ ಅವರು ವಿಜೇತರಾಗದಿರುವುದಕ್ಕೆ ತೀವ್ರವಾಗಿ ಬೇಸರಗೊಂಡಿರುವ ಅಭಿಮಾನಿಯೊಬ್ಬ, ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಕಾಕರ್ ಅವರಿಗೆ ಬೆದರಿಕೆಯ ಟ್ವೀಟ್ ಮಾಡಿದ್ದಾರೆ.
ಮುಂಬೈ'ಗೆ ಬಂದರೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ. ಶ್ರೀಶಾಂತ್ ರಿಯಲ್ ಫ್ಯಾನ್ ಎಂದು ಹೆಸರಿಟ್ಟುಕೊಂಡಿರುವ ವ್ಯಕ್ತಿ ಬೆದರಿಕೆ ಹಾಕಿದ್ದು, ಬೆದರಿಕೆಯ ಟ್ವೀಟನ್ನು ದೀಪಿಕಾ ಅವರು ಮುಂಬೈ ಪೊಲೀಸ್ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.