ಸಿನಿಮಾ ಸುದ್ದಿ

ಟಿವಿ9 ವಂಚನೆ ಕೇಸು: ತೆಲುಗು ನಟ ಶಿವಾಜಿ ಸೊಂಟಿನೆನಿ ಬಂಧಿಸಿ ವಿಚಾರಣೆ, ಬಿಡುಗಡೆ

Sumana Upadhyaya
ಹೈದರಾಬಾದ್: ಟಿವಿ9 ನಕಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಸೈಬರ್ ಅಪರಾಧ ಪೊಲೀಸರು ಟಾಲಿವುಡ್ ನಟ ಶಿವಾಜಿ ಸೊಂಟಿನೆನಿ ಅವರನ್ನು ಬುಧವಾರ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ನಂತರ ಅವರನ್ನು ಕಸ್ಟಡಿಗೆ ಕರೆದೊಯ್ದು ಸುಮಾರು 2 ಗಂಟೆ ಕಾಲ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
ನಕಲಿ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಸೈಬರ್ ಕ್ರೈಮ್ ಪೊಲೀಸರು ಈ ಹಿಂದೆ ನಟ ಶಿವಾಜಿ, ಟಿವಿ9 ಮಾಜಿ ಸಿಇಒ ರವಿ ಪ್ರಕಾಶ್ ಮತ್ತು ಸಿಎಫ್ಒ ಕೆವಿಎನ್ ಮೂರ್ತಿ ವಿರುದ್ಧ ಕೇಸು ದಾಖಲಿಸಿದ್ದರು.
ನಟ ಶಿವಾಜಿ ಇಂದು ಅಮೆರಿಕಾಕ್ಕೆ ತೆರಳಬೇಕಾಗಿತ್ತು. ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುತ್ತಿದ್ದಂತೆ ವಲಸೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಈ ಹಿಂದೆ ಸೈಬರಾಬಾದ್ ಕ್ರೈಮ್ ಪೊಲೀಸರು ನಟನಿಗೆ ಮೂರು ಬಾರಿ ಸಮ್ಮನ್ಸ್ ಜಾರಿ ಮಾಡಿದ್ದರು.
ಮುಂದಿನ ವಿಚಾರಣೆಗೆ ಜುಲೈ 11ರಂದು ಪೊಲೀಸರ ಮುಂದೆ ಹಾಜರಾಗುವಂತೆ ನಟನಿಗೆ ಸೂಚಿಸಲಾಗಿದೆ.
ಪ್ರಕಾಶ್ ಮತ್ತು ಮೂರ್ತಿ ಅವರ ಜೊತೆಗೆ ಟಿವಿ9 ವಾಹಿನಿಯ 40 ಸಾವಿರ ಷೇರುಗಳನ್ನು ಅಕ್ರಮವಾಗಿ ಖರೀದಿಸಿರುವ ಆರೋಪ ನಟ ಶಿವಾಜಿ ಮೇಲಿತ್ತು. ಟಿವಿ 9 ವಾಹಿನಿಯ ಮಾಲಿಕತ್ವ ಪಡೆದಿರುವ ಅಲಂದ ಮೀಡಿಯಾ ಅಂಡ್ ಎಂಟರ್ಟೈನ್ ಮೆಂಟ್ ಪ್ರೈ ಲಿಮಿಟೆಡ್ ಇವರ ಮೇಲೆ ದೂರು ಸಲ್ಲಿಸಿತ್ತು.
SCROLL FOR NEXT