ಸಿನಿಮಾ ಸುದ್ದಿ

ರಣಂ ಚಿತ್ರೀಕರಣ ವೇಳೆ ಸಿಲಿಂಡರ್ ಸ್ಫೋಟ, ಲಂಚ ಪಡೆದು 'ಅನುಮತಿ ನೀಡಿದ್ದ ಪೇದೆ' ಅಮಾನತು!

Srinivasamurthy VN
ಬೆಂಗಳೂರು: 'ರಣಂ' ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ಲಂಚ ಪಡೆದು ಚಿತ್ರೀಕರಣಕ್ಕೆ ಅನುಮತಿ ನೀಡಿದ್ದ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ನಗರದ ಬಾಗಲೂರಿನ ರಸ್ತೆಯಲ್ಲೇ ಮಾರ್ಚ್ 29ರಂದು 'ರಣಂ' ಚಿತ್ರೀಕರಣ ವೀಕ್ಷಿಸಲು ತಾಯಿ ಹಾಗೂ ಮಗಳು ತೆರಳಿದ್ದರು. ಈ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ತಾಯಿ ಸುಬೇನಾ ಹಾಗೂ ಮಗಳು ಆಯೇರಾ ಸಾವನ್ನಪ್ಪಿದ್ದರು. ಪೊಲೀಸ್ ಇಲಾಖೆಯ ಆಂತರಿಕ ವೈಫಲ್ಯದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಿದ್ದರು. ವರದಿ ಕೈ ಸೇರುತ್ತಿದ್ದಂತೆಯೇ ಬಾಗಲೂರು ಪೊಲೀಸ್ ಠಾಣೆಯ ಪೇದೆ ಭೀಮಾ ಶಂಕರ್ ಅವರನ್ನು ಅಮಾನತು ಮಾಡಿದ್ದಾರೆ ಎಂದು ಹೆಚ್ಚುವರಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. 
ಪೇದೆ ಭೀಮಾಶಂಕರ್ ಚಿತ್ರೀಕರಣಕ್ಕೆ ಅನುಮತಿ ಇಲ್ಲದಿದ್ದರೂ, 5,000 ರೂ. ಹಣ ಪಡೆದು ಚಿತ್ರೀಕರಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ ಎಸಗಿರುವುದು ಬೆಳಕಿಗೆ‌‌ ಬಂದಿತ್ತು. ಶೂಟಿಂಗ್ ನಡೆಸುವ ಮುನ್ನ ಚಿತ್ರ ನಿರ್ದೇಶಕ ಅನುಮತಿ ಕೋರಿ ಯಲಹಂಕ ಎಸಿಪಿ ಕಚೇರಿಗೆ ಭೇಟಿ ನೀಡಿದ್ದರು. ಆದರೆ, ಯಲಹಂಕ ಎಸಿಪಿ ಎಂಎಸ್ ಶ್ರೀನಿವಾಸ್ ಸೂಕ್ತ ದಾಖಲೆಮತ್ತು ಸೂಕ್ತ ಮುಂಜಾಗ್ರತ್ರಾ ಕ್ರಮ ಕೈಗೊಳ್ಳುವವರೆಗೂ ಅನುಮತಿ ನೀಡುವುದಿಲ್ಲ ಎಂದಿದ್ದರು. ಇದೇ ಸಮಯವನ್ನು ದುರುಪಯೋಗಪಡಿಸಿಕೊಂಡ ಪೇದೆ ಭೀಮಾ ಶಂಕರ್ ಕರ್ತವ್ಯ ಲೋಪ ಎಸಗಿ ಐದು ಸಾವಿರ ಲಂಚ ಪಡೆದು ಚಿತ್ರೀಕರಣ ನಡೆಸಲು ಅನುಮತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಇದೀಗ ಲಂಚ ಪಡೆದ ಪೇದೆಯನ್ನು ಅಮಾನತು ಮಾಡಲಾಗಿದೆ.
SCROLL FOR NEXT