ಸಿನಿಮಾ ಸುದ್ದಿ

'ಬುಕ್ ಮೈ ಶೋ' ಹೆಸರಿನಲ್ಲಿ ವಂಚಕರಿದ್ದಾರೆ ಎಚ್ಚರ: ಕೆಎಫ್ ಸಿಸಿ

Srinivas Rao BV
ಬೆಂಗಳೂರು: ಬುಕ್ ಮೈ ಶೋ ಹೆಸರಿನಲ್ಲಿ ಕೆಲ ವಂಚಕರು ನಿರ್ಮಾಪಕರನ್ನು ಸುಲಿಗೆ ಮಾಡುತ್ತಿದ್ದು, ಯಾವುದೇ ನಿರ್ಮಾಪಕರು ಹಣ ನೀಡಿ ವಂಚನೆಗೊಳಗಾಗದಿರಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಸಿದೆ. 
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ, ವೀರೇಶ್, ಕರಿಸುಬ್ಬು, ಸುಂದರರಾಜ್ ಮತ್ತಿತರರು ಈ ಕುರಿತು ಪ್ರಸ್ತಾಪಿಸಿ, ಮೋಸ ಹೋಗುವವರು ಇರುವತನಕ ಮೋಸ ಮಾಡುವವರೂ ಇರುತ್ತಾರೆ. ಕೆಲ ನಯವಂಚಕರು ಬುಕ್ ಮೈ ಶೋ ಹೆಸರಿನಲ್ಲಿ ನಿರ್ಧಿಷ್ಟ ಪ್ಯಾಕೇಜ್ ಗಳಿಗೆ ಇಂತಿಷ್ಟು ಹಣ ನೀಡುವಂತೆ ಹೇಳಿ ಸುಲಿಗೆ ಮಾಡುತ್ತಿದ್ದಾರೆ. 
ಕೆಲ ಜನಪ್ರಿಯ ಚಿತ್ರಗಳನ್ನು ನಿರ್ಮಾಪಕರಿಗೆ ತೋರಿಸಿ, ಇವುಗಳಿಗೆ ರೇಟಿಂಗ್ ನೀಡಿದ್ದರಿಂದಲೇ ಪ್ರೇಕ್ಷಕರ ಸಂಖ್ಯೆ ಹೆಚ್ಚಲು ಸಾಧ್ಯವಾಯಿತು ಎಂದು ನಂಬಿಸಿ 15 ಸಾವಿರದಿಂದ ಲಕ್ಷದವರೆಗೆ ಹಣ ದೋಚುತ್ತಿದ್ದಾರೆ. ಈ ಬಗ್ಗೆ ಬುಕ್ ಮೈ ಶೋ ಕೂಡ ನೋಟಿಸ್ ನೀಡಿದ್ದು, ತಾವು ಯಾವುದೇ ರಿವ್ಯೂ, ರೇಟಿಂಗ್ಸ್ ನೀಡುವುದಿಲ್ಲ. ಕೇವಲ ಜಾಹಿರಾತು ಪ್ರಕಟಿಸುವುದಾಗಿ ಸ್ಪಷ್ಟನೆ ನೀಡಿದೆ. ಹೀಗಾಗಿ ಮುಂದೆ ಯಾರೂ ಕೂಡ ಇಂತಹ ವಂಚಕರ ಮಾತಿಗೆ ಮರುಳಾಗದಿರಿ ಎಂದು ಖಜಾಂಚಿ ವೀರೇಶ್ ಮನವಿ ಮಾಡಿದರು. 
ಡಿಸ್ಟ್ರಿಬ್ಯೂಟರ್ ಗಳಿಂದಲೂ ವಂಚನೆ 
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳದ ಕೆಲವರು ಚಿತ್ರಗಳ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ಮಾಪಕರು ಮೋಸ ಹೋದ ನಂತರವೇ ‘ವಂಚನೆಗೆ ಒಳಗಾಗಿದ್ದೇವೆ’ ಎಂದು ಅರಿವಾಗುತ್ತದೆ. ಆದರೆ ಅನೇಕರು ಮಂಡಳಿಗೆ ದೂರು ನೀಡುವುದೇ ಇಲ್ಲ. ಫೇಸ್ ಬುಕ್ ಪೇಜ್ ಗಳ ಮೂಲಕವೂ ಕೆಲವರಿಗೆ ಮೋಸವಾಗಿದೆ ಎಂಬ ಮಾತು ಕೇಳಿಬಂದಿದೆಯೇ ಹೊರತು ಯಾರೂ ದೂರು ನೀಡಿಲ್ಲ. ಆದರೆ ದೂರು ನೀಡಿದ್ದರೂ ಮಂಡಳಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ವೀರೇಶ್ ಸ್ಪಷ್ಟಪಡಿಸಿದರು.
ಥಿಯೇಟರ್ ಗಳ ನಿರ್ವಹಣೆ ಅತ್ಯಗತ್ಯ 
ಕರ್ನಾಟಕ ವಾಣಿಜ್ಯ ಮಂಡಳಿ ಸ್ಥಾಪನೆಯಾಗಿ 75 ವರ್ಷಗಳಾಗಲಿವೆ. ಈ ಸಂದರ್ಭದಲ್ಲಿ ಚಿತ್ರಮಂದರಿಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ನೋವಿದೆ. ಇದನ್ನು ಸರಿಪಡಿಸಿಕೊಳ್ಳಬೇಕಿದ್ದಲ್ಲಿ ಮಾಲೀಕರು ಜಾಗೃತರಾಗಿ, ಥಿಯೇಟರ್ ಗಳ ಸಮರ್ಪಕ ನಿರ್ವಹಣೆಗೆ ಮುಂದಾಗಬೇಕು ಎಂದು ಚಿನ್ನೇಗೌಡ ತಿಳಿಸಿದರು.
SCROLL FOR NEXT