ಸಿನಿಮಾ ಸುದ್ದಿ

ಇಥಿಯೋಪಿಯನ್ ಏರ್ ಲೈನ್ಸ್ ವಿಮಾನದಲ್ಲಿ ತೆರಳಬೇಕಿದ್ದ ರಿಕಿ ಕೆಜ್: ಅದೃಷ್ಟವಶಾತ್ ಅಪಘಾತದಿಂದ ಪಾರು!

Srinivas Rao BV
ನವದೆಹಲಿ: ಇಥಿಯೋಪಿಯಾದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡಿದ್ದು 157 ಮಂದಿ ಸಜೀವ ದಹನವಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೆಜ್ ಸಹ ಇದೇ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಅದೃಷ್ಟವಶಾತ್ ಈ ಭೀಕರ ಅಪಘಾತದಿಂದ ಪಾರಾಗಿದ್ದಾರೆ.
ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನದ ಬಗ್ಗೆ ಸ್ವತಃ ರಿಕಿ ಕೆಜ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ತಾವೂ ಇದೇ ವಿಮಾನದಲ್ಲಿ ನೈರೋಬಿಗೆ ತೆರಳಿ ವಿಶ್ವಸಂಸ್ಥೆ ಪರಿಸರ ಅಸೆಂಬ್ಲಿಯಲ್ಲಿ ಭಾಗಿಯಾಗಬೇಕಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. 
"ನಾನು ಸಹ ಇದೇ ವಿಮಾದಲ್ಲಿ ನೈರೋಬಿಗೆ ತೆರಳಬೇಕಿತ್ತು, ಆದರೆ ಎರಡು ದಿನಗಳ ಮುಂಚಿತವಾಗಿಯೇ ಬರಬೇಕಾದ ಹಿನ್ನೆಲೆಯಲ್ಲಿ ವಿಮಾನವನ್ನು ಬದಲಾಯಿಸಿದೆ. ಆದ್ದರಿಂದ ಈಗಾಗಲೇ ನಾನು ನೈರೋಬಿಯಲ್ಲಿದ್ದೇನೆ. ಬೇರೆ ಬೇರೆ ದೇಶಗಳಿಂದ ಬರಬೇಕಿದ್ದ ಪ್ರತಿನಿಧಿಗಳು ಇಂದು ಪತನಗೊಂಡ ವಿಮಾನದಲ್ಲಿದ್ದರು. ಈ ಪೈಕಿ ಕೆಲವರು ನನ್ನ ಸ್ನೇಹಿತರಾಗಿದ್ದರು ಇನ್ನೂ ಕೆಲವರು ಪರಿಚಯಯದವರಾಗಿದ್ದರು. ಅವರೆಲ್ಲರೂ ಈ ಭೂಮಿಯನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಲ್ಲದೇ ಈ ಪ್ರಪಂಚ ಬಡವಾಗಲಿದೆ. ಆದರೆ ನಾವು ಅವರ ನೆನಪಿನಲ್ಲಿ ಮತ್ತಷ್ಟು ಹೆಚ್ಚಿನ ಕೆಲಸ ಮಾಡುತ್ತೇವೆ ಎಂದು ರಿಕಿ ಕೇಜ್ ಹೇಳಿದ್ದಾರೆ. 
SCROLL FOR NEXT