ಸಿನಿಮಾ ಸುದ್ದಿ

ದುಬಾರಿ ಬೆಲೆಯ ಹೂಗುಚ್ಛ ಕೊಡೋದು ವೇಸ್ಟ್ ಅಲ್ವಾ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ: ರವಿಚಂದ್ರನ್

Shilpa D
ಬೆಂಗಳೂರು: ಮದುವೆ ಮನೆಯನ್ನು ನಾನಾಬಗೆಯ ಹೂಗಳಿಂದ ಸಿಂಗರಿಸುವುದು ಸಹಜ ಹಾಗೂ ಒಳ್ಳೆಯ ಪದ್ಧತಿ. ಆದರೆ ನವದಂಪತಿಗೆ ಪುಷ್ಪಗುಚ್ಛ ಕೊಡೋದು ವೇಸ್ಟ್ ಅಲ್ವಾ? ಎಂದು ನಟ, ನಿರ್ದೇಶಕ, ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. 
ಹೂಗಳು ಕಣ್ಣಿಗೆ ತಂಪು ನೀಡುವುದರ ಜೊತೆಗೆ ಮನಸ್ಸಿಗೆ ನೆಮ್ಮದಿಯ ಭಾವ ನೀಡುತ್ತದೆ. ಹೀಗಾಗಿ ಆರತಕ್ಷತೆ ಸಂದರ್ಭದಲ್ಲಿ ಪುಷ್ಪಗುಚ್ಛ ನೀಡುವ ಪರಿಪಾಠ ಆರಂಭವಾಯಿತು.  ಇದು ಎಷ್ಟರಮಟ್ಟಿಗೆ ವ್ಯಾಪಿಸಿದೆಯೆಂದರೆ ಪ್ರತಿಯೊಬ್ಬರೂ ಬೆಲೆಬಾಳುವ ಹೂಗುಚ್ಛ ತಂದು ನವದಂಪತಿಗೆ ನೀಡಿ ಫೋಟೊಗೆ ಪೋಸ್ ಕೊಟ್ಟು ಹೋಗುವಂತಾಗಿದೆ. ಇಷ್ಟಾದ ಬಳಿಕ ಅದಕ್ಕೆ ಮೂಲೆಯೇ ಗತಿ.  ಹೀಗಾಗಿ ಒಂದೊಂದು ಮದುವೆ ಮನೆಯಲ್ಲೂ ಇಂತಹ ಸಾವಿರಾರು ರೂಪಾಯಿ ವ್ಯರ್ಥವಾಗುತ್ತದಲ್ಲ ಎಂದು  ರವಿಚಂದ್ರನ್ ಕಳಕಳಿ ವ್ಯಕ್ತ ಪಡಿಸಿದ್ದಾರೆ.
ಪುಷ್ಪಗುಚ್ಛಗಳನ್ನು ಕೊಳ್ಳುವುದರಿಂದ ರೈತರಿಗೆ, ಹೂ ಮಾರುವವರಿಗೆ ಅನುಕೂಲವಾಗುವುದೇನೋ ನಿಜ. ಆದರೆ ಅದನ್ನು ಮುಡಿಯುವುದಿಲ್ಲ, ದೇವರ ಪೂಜೆಗೂ ಬಳಸುವುದಿಲ್ಲ.ಅಥವಾ ಮನೆಯ ಅಲಂಕಾರಕ್ಕೆ ಬಳಸಲೂ ಆಗುವುದಿಲ್ಲ. ಹೀಗಾಗಿ ಅದೇ ದುಡ್ಡನ್ನು ವೋಚರ್ ರೂಪದಲ್ಲಿ ಕೊಟ್ಟರೆ, ಸಂಗ್ರಹವಾದ ಅಷ್ಟೂ ವೋಚರ್ ಗಳನ್ನು ಅನಾಥಶ್ರಮಗಳಿಗೆ ನೀಡಬಹುದಲ್ಲ ಎಂಬ ಸಲಹೆಯನ್ನು ಜನರ ಮುಂದಿಟ್ಟಿದ್ದಾರೆ.
ರವಿಚಂದ್ರನ್ ಅವರ ಈ ಸಲಹೆ ಒಂದು ರೀತಿಯಲ್ಲಿ ಸ್ವೀಕಾರಾರ್ಹ ಎನ್ನಬಹುದು. ಮದುಮಕ್ಕಳಿಗೆ ಅವಶ್ಯವಿರುವ ವಸ್ತುಗಳು, ಉತ್ತಮ ಕಲಾಕೃತಿಗಳು ಅಥವಾ ಸದಭಿರುಚಿಯ ಸಾಹಿತ್ಯವಿರುವ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು.  ಅಲ್ಲವೇ?
ಇನ್ನು ಮಗಳ ಮದುವೆ ಸಂಭ್ರಮದಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೇ 29ರಂದು ಮದುವೆ ಮುಗಿದಿರುತ್ತದೆ. ನೆಂಟರಿಷ್ಟರನ್ನು ಕಳುಹಿಸಿಕೊಡುವ ಓಡಾಟಗಳಿರುತ್ತವೆ. ಇಂತಹ ಸಮಯದಲ್ಲಿ ಅಭಿಮಾನಿಗಳು ಮನೆಯ ಮುಂದೆ ಕಾದು ನಿಲ್ಲುವುದು ನನಗಿಷ್ಟವಿಲ್ಲ.  ಹೀಗಾಗಿ ಮೊದಲೇ ತಿಳಿಸುತ್ತಿದ್ದೇನೆ ಎಂದಿದ್ದಾರೆ.
SCROLL FOR NEXT