ಸಿನಿಮಾ ಸುದ್ದಿ

ಕನ್ನಡದ ಖ್ಯಾತ ರಂಗಭೂಮಿ, ಚಲನಚಿತ್ರ ನಟ ಶೇಖರ್ ಭಂಡಾರಿ ಕೊರೋನಾದಿಂದ ಸಾವು

Raghavendra Adiga

ಮಂಗಳೂರು: ಕರಾವಳಿ ಭಾಗದ ಪ್ರಸಿದ್ದ ರಂಗಭೂಮಿ ಕಲಾವಿದ ಶೇಖರ್ ಭಂಡಾರಿ(72)  ಕೊರೋನಾ ಸೋಂಕಿನಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆಲವು ದಿನಗಳ ಹಿಂದೆ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಂಡಾರಿ ಪ್ರಸಿದ್ಧ ಸಿನಿ ನಟ, ಚುಟುಕು ಕವಿಯಾಗಿದ್ದು ಕಾರ್ಕಳ ಮೂಲದವಾರಾಗಿದ್ದಾರೆ. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದ ಭಂಡಾರಿಯವರಿಗೆ 2018 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ತವ ಪ್ರಶಸ್ತಿ ಒಲಿದು ಬಂದಿತ್ತು.

ಶೇಖರ್ ಭಂಡಾರಿ ಕಾರ್ಕಳದ ಬೆಟ್ಟದ ಮನೆಯ ಬಾಬು ಭಂಡಾರಿ ಮತ್ತು ಅಭಯ ಭಂಡಾರಿ ಅವರ ಪುತ್ರರಾಗಿದ್ದು ಶಾಲಾ-ಕಾಲೇಜು ದಿನಗಳಿಂದಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರು.

ವಿಜಯಾ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಭಂಡಾರಿ ಹಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಸಹ ಅಭಿನಯಿಸಿದ್ದರು,  . ಪ್ರಜೆಗಳು ಪ್ರಭುಗಳು, ಇಂದ್ರ ಧನುಷ್, ಸ್ವಲ್ಪ ಅಜೆಸ್ಟ್ ಮಾಡ್ಕೋಳಿ, ಏಕಾಂಗಿ, ಓ ನನ್ನ ನಲ್ಲೆ, ಲವ್, ಧರ್ಮಯೋಧರು, ನನ್ನ ತಂಗಿ, ಕೋಟಿ ಚೆನ್ನಯ್ಯ, ತಮಾಶೆಗಾಗಿ, ಐದೊಂದ್ಲ ಐದು ಇವು ಅವರ ಅಭಿನಯದ ಕೆಲ ಚಲನಚಿತ್ರಗಳಾಗಿದೆ.

ಅಲ್ಲದೆ ಕಿರಿತೆರೆಯಲ್ಲಿ ಪ್ರಸಾರವಾದ ಜೋಗುಳ, ಗುರುರಾಘವೇಂದ್ರ ವೈಭವ, ರಂಗೋಲಿ ಇನ್ನೂ ಮುಂತಾದ ಧಾರಾವಾಹಿಗಳಲ್ಲಿ ಸಹ ಅವರು ನಟಿಸಿದ್ದರು. 

ಮೃತರು ಪತ್ನಿ ವಾರಿಜಾ ಶೇಖರ್, ಮಕ್ಕಳಾದ ಪ್ರೀತಿ ಪದ್ಮನಾಭ್ ಮತ್ತು ಸ್ವಾತಿ ಶರತ್, ಆತ್ಮೀಯ ಕುಟುಂಬ ವರ್ಗ, ಸ್ನೇಹಿತರನ್ನು ಅಗಲಿದ್ದಾರೆ. 

SCROLL FOR NEXT