ಸಿನಿಮಾ ಸುದ್ದಿ

ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

Raghavendra Adiga

ರಾಜ್ಯದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ (ಎಂ ಗೋವಿಂದ ಪೈ) ಜೀವನ ತೆರೆಗೆ ಬರಲಿದೆ. ಗೋವಿಂದ ಪೈ ತವರೂರಿನವರಾದ ಸ್ಯಾಂಡಲ್ವುಡ್ ನಟ ರಘುಭಟ್ ನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ.

ಈಗಾಗಲೇ ಸಿನಿಮಾದ ತೆರೆಮರೆಯ ಕೆಲಸಗಳು ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಗೋವಿಂದ ಪೈ ಅವರ ಜನ್ಮದಿನವಾದ ಮಾರ್ಚ್ 23ರಂದು ಮುಹೂರ್ತ ನೆರವೇರಿ, ಸಿನಿಮಾ ಸೆಟ್ಟೇರಿರುತ್ತಿತ್ತು. ಆದರೆ, ಕೊರೋನಾ ಲಾಕ್ಡೌನ್ ಕಾರಣದಿಂದ ಚಿತ್ರೀಕರಣ ಆರಂಭವಾಗಿಲ್ಲ.

ಅನುಭವಿ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ. ರಘುಭಟ್ ತಮ್ಮ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ನಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ನಿರ್ದೇಶಕರು ಯಾರೆಂದು ತಿಳಿಯಲಿದೆ.

ಕಲಾವಿದರ ವಿಷಯಕ್ಕೆ ಬಂದರೆ ಸ್ಯಾಂಡಲ್ವುಡ್ನ ಸ್ಟಾರ್ ನಟರೊಬ್ಬರು ಗೋವಿಂದ ಪೈ ಪಾತ್ರದಲ್ಲಿ ಮಿಂಚುವುದು ಕನ್ಫರ್ಮ್ ಆಗಿದೆ. ಆ ನಟರೊಂದಿಗೆ ಮಾತುಕತೆ ಅಂತಿಮ ಹಂತದಲ್ಲಿದೆ. ಅಲ್ಲದೆ ಅನೇಕ ಯುವ ಮತ್ತು ಹಿರಿಯ ಕಲಾವಿದರು ಅಭಿನಯಿಸಲಿದ್ದಾರೆ ಎಂದು ನಟ, ನಿರ್ಮಾಪಕ ರಘುಭಟ್ ತಿಳಿಸಿದ್ದಾರೆ.

ಇದು ನಾಡಿನ ಹೆಮ್ಮೆಯ ಹಿರಿಯ ಕವಿಗಳ ಬಯೋಪಿಕ್ ಮಾತ್ರವಲ್ಲದೆ ಪಕ್ಕಾ ಕಮರ್ಷಿಯಲ್ ಸಿನಿಮಾ ಕೂಡ ಹೌದು. ಗೋವಿಂದ ಪೈ ಅವರ ಜೀವನ, ನಡೆದುಬಂದ ಹಾದಿ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರಿಗೂ ತೋರಿಸಬೇಕು. ಅದಕ್ಕೆ ಸಿನಿಮಾಕ್ಕಿಂತ ಉತ್ತಮ ಮಾರ್ಗ, ಮಾಧ್ಯಮ ಬೇರಿಲ್ಲ. ಹಾಗಾಗಿ ಸಿನಿಮಾ ಮಾಡಲು ಮುಂದಾಗಿದ್ದೇನೆ ಎಂದಿದ್ದಾರೆ.

ಗೋವಿಂದ ಪೈ ಕರ್ನಾಟಕ ಮತ್ತು ಕೇರಳ ಗಡಿಭಾಗದ ಮಂಜೇಶ್ವರದಲ್ಲಿ 1883 ಮಾರ್ಚ್ 23 ಜನಿಸಿದ್ದರು. 80 ವರ್ಷದ ತುಂಬು ಜೀವನ ನಡೆಸಿದ್ದ ಅವರು 1963 ಸೆಪ್ಟೆಂಬರ್ 23ರಂದು ವಿಧಿವಶರಾದರು. 1949ರಲ್ಲಿ ಮದರಾಸು ಸರ್ಕಾರ (1956ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ, ಅಂದರೆ ಈಗಿನ ತಮಿಳುನಾಡಿನಲ್ಲಿತ್ತು.) ಗೋವಿಂದ ಪೈ ಅವರಿಗೆ ರಾಷ್ಟ್ರಕವಿ ಎಂದು ಸನ್ಮಾನಿತ್ತು. 

SCROLL FOR NEXT