ಸಿನಿಮಾ ಸುದ್ದಿ

ಶ್ರೀಮನ್ನಾರಾಯಣನಿಗೆ ಸಂಕಷ್ಟ: ರಕ್ಷಿತ್‌ ಶೆಟ್ಟಿ ವಿರುದ್ಧ ಜಾಮೀನುರಹಿತ ವಾರಂಟ್‌

Shilpa D

ಬೆಂಗಳೂರು: ಕಾಪಿ ರೈಟ್‌ ಉಲ್ಲಂಘಿಸಿ ‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಹಾಡು ಬಳಸಿದ ಆರೋಪ ಸಂಬಂಧ ವಿಚಾರಣೆಗೆ ಹಾಜರಾಗದ ನಟ ರಕ್ಷಿತ್ ಶೆಟ್ಟಿ ಅವರ ವಿರುದ್ಧ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು ಅವರ ಮಾಲೀಕತ್ವದ ಪರಮ್ವಾಹ್ ಸ್ಟುಡಿಯೋಸ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‍ಗೆ ಸಂಕಷ್ಟ ಎದುರಾಗಿದೆ. 2016ರಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿದ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅನುಮತಿ ಇಲ್ಲದೆ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಲಹರಿ ಆಡಿಯೋ ಸಂಸ್ಥೆ ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಾಹ್ ಸ್ಟುಡಿಯೋಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು.

ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನಗರದ 9ನೇ ಎಸಿಎಂಎಂ ಕೋರ್ಟ್ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಆರೋಪಿಗಳು ನ್ಯಾಯಾಲಯಕ್ಕೆ ನಿರಂತರ ಗೈರು ಹಾಜರಾದ ಹಿನ್ನಲೆಯಲ್ಲಿ ಕೋರ್ಟ್ ಜಾಮೀನುರಹಿತ ಬಂಧನ ವಾರಂಟ್ ಜಾರಿ ಮಾಡಿದೆ.

ಕಿರಿಕ್ ಪಾರ್ಟಿ ಚಿತ್ರದಲ್ಲಿನ "ಹೇ ಹೂ ಆರ್ ಯೂ..." ಹಾಡಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಶಾಂತಿ ಕ್ರಾಂತಿ' ಚಿತ್ರದ "ಮಧ್ಯರಾತ್ರಿಯಲ್ಲಿ..." ಹಾಡಿನ ಟ್ರ್ಯಾಕ್ ಬಳಕೆ ಮಾಡಿಕೊಂಡು ಕಾಪಿರೈಟ್ ಉಲ್ಲಂಘಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. 

ಇದಕ್ಕೆ ಸಂಬಂಧಿಸಿದಂತೆ ಹಾಡಿನ ರೈಟ್ಸ್ ಹೊಂದಿರುವ ಲಹರಿ ಆಡಿಯೋ ಸಂಸ್ಥೆ ರಕ್ಷಿತ್ ಶೆಟ್ಟಿ ಒಡೆತನದ ಪರಮ್ ವಾಹ್ ಸ್ಟುಡಿಯೋಸ್ ವಿರುದ್ಧ ದೂರು ದಾಖಲಿಸಿತ್ತು.

SCROLL FOR NEXT