ಸಿನಿಮಾ ಸುದ್ದಿ

ತೆಲಂಗಾಣ ಮರ್ಯಾದಾ ಹತ್ಯೆ ಕುರಿತು ಸಿನಿಮಾ: ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲು

Manjula VN

ಹೈದರಾಬಾದ್: ತೆಲಂಗಾಣದಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಘಟನೆ ಆಧರಿಸಿ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಮರ್ಡರ್ ಹೆಸರಿನಲ್ಲಿ ಸಿನಿಮಾ ನಿರ್ಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. 

ಗರ್ಭಿಣಿಯಾಗಿದ್ದ ಪತ್ನಿ ಅಮೃತಾಳನ್ನು ತಪಾಸಣೆಗೆಂದು ಪತಿ ಪ್ರಣಯ್ ಕುಮಾರ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದು. ಈ ವೇಳೆ ಕೆಲ ದುಷ್ಕರ್ಮಗಳು ಪ್ರಣಯ್ ಮೇಲೆ ದಾಳಿ ನಡೆಸಿ, ಹತ್ಯೆ ಮಾಡಿದ್ದರು. 

ಪ್ರಕರಣದಲ್ಲಿ ಅಮೃತಾಳ ತಂದೆ ಮಾರುತಿ ರಾವ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಅಮೃತಾ ವರ್ಷಿಣಿ, ಪ್ರಣಯ್ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಪ್ರಣಯ್ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರಿಂದ ಜಾತಿ ಮತ್ತು ಪ್ರತಿಷ್ಟೆಯ ವಿಚಾರವಾಗಿ ಮಾವ ಮಾರುತಿ ಹಾಗೂ ಕುಟುಂಬದವರಿಗೆ ಆತನ ಮೇಲೆ ದ್ವೇಷವಿತ್ತು. ಅದೇ ಕಾರಣಕ್ಕಾಗಿ ಸುಪಾರಿ ನೀಡಿ ಪ್ರಣಯ್ ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗುತ್ತಿತ್ತು. 

ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ಆದರೆ ಈ ನಡುವೆ ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಮಾರುತಿ ರಾವ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. 

ಪ್ರಕರಣ ಇನ್ನು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ಈ ಕುರಿತು ಸಿನಿಮಾ ಮಾಡುವುದು ಸರಿಯಲ್ಲ ಎಂದು ಪ್ರಸ್ತಾಪಿಸಿ ಪ್ರಣಯ್ ತಂದೆ ಬಾಲಾಸ್ವಾಮಿಯವರು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. 

ಸಮ್ಮತಿ ಪಡೆಯದೆಯೇ ತಮ್ಮ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಬಾಲಾಸ್ವಾಮಿ ಮನವಿ ಮೇರೆಗೆ ನ್ಯಾಯಾಲಯ ನೀಡಿರುವ ಆದೇಶ ಅನ್ವಯ ರಾಮ್ ಗೋಪಾಲ್ ವರ್ಮಾ ಸಿನಿಮಾದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. 

ಜೂ.21 ರಂದು ಅಪ್ಪಂದಿರ ದಿನದಂದು ರಾಮ್ ಗೋಪಾಲ್ ವರ್ಮಾ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದರು. ತಂದೆ ಮಗಳನ್ನು ಅತಿಯಾಗಿ ಪ್ರೀತಿಸಿದರ ಅಪಾಯ... ಎಂದು ಬರೆದು ವರ್ಮಾ ಪೋಸ್ಟರ್ ಹಂಚಿಕೊಂಡಿದ್ದರು. 

SCROLL FOR NEXT