ಸಿನಿಮಾ ಸುದ್ದಿ

ಓರ್ವ ನಟನಾಗಿ ನಿರ್ಮಾಪಕ ಮುನಿರತ್ನಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರಲ್ಲಿ ತಪ್ಪಿಲ್ಲ: ನಿಖಿಲ್ ಗೌಡ ಸ್ಪಷ್ಟನೆ

Srinivasamurthy VN

ಬೆಂಗಳೂರು: ನಿರ್ಮಾಪಕ ಹಾಗೂ ರಾಜಕಾರಣಿ ಮುನಿರತ್ನ ಅವರ ಹುಟ್ಟುಹಬ್ಬಕ್ಕೆ ಜೆಡಿಎಸ್‌ ಯುವ ನಾಯಕ ನಿಖಿಲ್ ಗೌಡ ಶುಭಾಶಯ ಕೋರಿದ್ದಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಗೌಡ ಫೇಸ್‌ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

" ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. 'ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು‘ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ ಎಂದು ನಿಖಿಲ್ ಹೇಳಿದ್ದಾರೆ.

ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ. ಮೋದಿ ದೇವೇಗೌಡರಿಗೆ ಶುಭ ಕೋರುತ್ತಾರೆ. ಯಡಿಯೂರಪ್ಪನವರು ಕುಮಾರಸ್ವಾಮಿ ಅವರಿಗೆ ಶುಭ ಆಶಿಸುತ್ತಾರೆ. ಕುಮಾರಸ್ವಾಮಿ ಅವರೂ ಶುಭಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ಅವರ ಸರ್ಕಾರವನ್ನು ಉರುಳಿಸುವಲ್ಲಿ ರಾಜರಾಜೇಶ್ವರಿ ನಗರದ ಅಂದಿನ ಕಾಂಗ್ರೆಸ್ ಶಾಸಕ ಮುನಿರತ್ನ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಇವರ ಹುಟ್ಟುಹಬ್ಬಕ್ಕೆ ನಿಖಿಲ್‌ ಕುಮಾರಸ್ವಾಮಿ ಶುಭ ಕೋರಿದ ಪ್ರಸಂಗ ಅನೇಕ ಜೆಡಿಎಸ್ ‌ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

SCROLL FOR NEXT