ಸಿನಿಮಾ ಸುದ್ದಿ

ಕಮಲ್ ಹಾಸನ್ ಹಳೆ ಮನೆ ಬಾಗಿಲ ಮೇಲೆ ಕ್ವಾರಂಟೈನ್ ಸ್ಟಿಕ್ಕರ್, ವಿವಾದ ನಂತರ ತೆರವು...!

Manjula VN

ಚೆನ್ನೈ: ನಟ- ರಾಜಕಾರಣಿ ಮಕ್ಕಳ್ ನೀಧಿ ಮೈಯಂ(ಎಂಎನ್ ಪಿ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಆಳ್ವಾರ್ ಪೇಟ್ ನಲ್ಲಿರುವ ಕಚೇರಿ ಮುಂದೆ ಗ್ರೇಟರ್ ಚೆನ್ನೈ ಕಾರ್ಪೋರೇಷನ್ (ಜಿಸಿಸಿ) ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನಂತರ ಸ್ಟಿಕ್ಕರ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಕಮಲ್ ಹಾಸನ್ ಅವರನ್ನು ಮಾರ್ಚ್ ೧೦ ರಿಂದ ಏಪ್ರಿಲ್ ೧೦ ರವರೆಗೆ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂಬ ಸ್ಟಿಕ್ಕರ್ ಅನ್ನು ಕಚೇರಿಯ ಬಾಗಿಲಿನ ಅಂಟಿಸಲಾಗಿತ್ತು.

ಇತ್ತೀಚಿಗೆ ವಿದೇಶಕ್ಕೆ ತೆರಳಿ ಬಂದಿರುವ ಪ್ರವಾಸ ಚರಿತ್ರೆ ಹೊಂದಿರುವ ವ್ಯಕ್ತಿಗಳ ಮನೆ ಬಾಗಿಲುಗಳ ಮೇಲೆ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಅಧಿಕಾರಿಗಳು ಕೊರೊನಾ ವೈರಸ್ ಹರಡುವುದನ್ನು ತಡೆಯುವ ಕ್ರಮವಾಗಿ ಸ್ಟಿಕ್ಕರ್ ಅಂಟಿಸಿದ್ದರು.

ಕಾರ್ಪೋರೇಷನ್ ಅಧಿಕಾರಿಗಳು ಸ್ಟಿಕ್ಕರ್ ಅಂಟಿಸುತ್ತಿದ್ದಂತೆಯೇ ಟಿವಿ ವಾಹಿನಿಗಳು ಕಮಲ್ ಹಾಸನ್ ಅವರಿಗೆ ಕೋವಿಡ್ -೧೯ ಲಕ್ಷಣಗಳು ಕಾಣಿಸಿಕೊಂಡಿವೆ ವ್ಯಾಪಕ ಸುದ್ದಿ ಬಿತ್ತರಿಸಲು ಆರಂಭಿಸಿದವು.

ಸ್ಟಿಕ್ಕರ್ ವಿವಾದ ಸೃಷ್ಟಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರಮಾದದಿಂದಾಗಿ ಸ್ಟಿಕ್ಕರ್ ಅಂಟಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ಕಳೆದ ಕೆಲವು ವರ್ಷಗಳಿಂದ ಯಾವುದೇ ದೇಶಗಳಿಗೆ ತಾವು ತೆರಳಿಲ್ಲ, ಹಾಗಾಗಿ ತಾವು ಕ್ವಾರಂಟೈನ್ ಗೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾರಾಣಾಂತಿಕ ಸೋಂಕು ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡಿಕೊಂಡ ನಂತರ ತಾವೂ ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿರುವುದಾಗಿ ಹೇಳಿದ್ದಾರೆ.

ನನ್ನ ಬಗ್ಗೆ ಕಾಳಜಿ ವಹಿಸಿ, ತೋರಿಸಿದ ಪ್ರೀತಿಗಾಗಿ ಎಲ್ಲರಿಗೂ ದೊಡ್ಡ ಧನ್ಯವಾದಗಳು. ನನ್ನ ಮನೆಯ ಮುಂದೆ ಅಂಟಿಸಿರುವ ಸ್ಟಿಕ್ಕರ್ ಆಧಾರದ ಮೇಲೆ ಈ ರೀತಿಯ ಸುದ್ದಿ ಹಬ್ಬಿದೆ ನಾನು ಕ್ವಾರಂಟೈನ್ ಗೆ ಒಳಗಾಗಿಲ್ಲ ಎಂದು ಕಮಲ್ ಹಾಸನ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಲ್ಲರಿಗೂ ತಿಳಿದರುವಂತೆ ತಾವು ಕೆಲ ವರ್ಷಗಳಿಂದ ವಿದೇಶಗಳಿಗೆ ತೆರಳದೆ ಮಕ್ಕಳ್ ನೀಧಿ ಮೈಯಂ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಾಗಿ ನಾನು ಕ್ವಾರಂಟೈನ್ ಗೆ ಒಳಗಾಗಿದ್ದೇನೆ ಎಂದು ಹಬ್ಬಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮ ಜನರಿಗೆ ಮನವಿ ಮಾಡಿಕೊಂಡಿರುವಂತೆ ನಾನೂ ಸಹ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದೇನೆ. ಮತ್ತೊಮ್ಮೆ... ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂಬುದು ನನ್ನ ವಿನಂತಿ ಎಂದು ತಿಳಿಸಿದ್ದಾರೆ.

ಈ ನಡುವೆ ಎಂ ಎನ್ ಎಂ ಪಕ್ಷದ ವಕ್ತಾರ ಮುರಳಿ ಅಬ್ಬಾಸ್, ಕಮಲ್ ಹಾಸನ್ ಅವರು ಯಾವುದೇ ಪ್ರವಾಸ ಚರಿತ್ರೆ ಹೊಂದಿಲ್ಲದಿದ್ದರೂ, ಪಕ್ಷದ ಕಚೇರಿ ಬಾಗಿಲಿನ ಮೇಲೆ ಪೋಸ್ಟರ್ ಅಂಟಿಸಿರುವುದು ನಮಗೆ ದಿಗ್ಭ್ರಮೆ ಮೂಡಿಸಿದೆ. ಕಮಲ್ ಹಾಸನ್ ಇಂಡಿಯನ್-೨ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಸಂಭವಿಸಿದ ದುರಂತದ ನಂತರ ಗಾಯಗೊಂಡವರ ಭೇಟಿಯಾಗಿದ್ದರು. ಅಲ್ಲದೆ ಅವರು ಪೊಲೀಸ್ ತನಿಖೆಯಲ್ಲೂ ಪಾಲ್ಗೊಂಡಿದ್ದರು ಎಂದು ವಿವರಿಸಿದ್ದಾರೆ.

ಮೇಲಾಗಿ, ಅಳ್ವಾರ್ ಪೇಟ್ ಕಟ್ಟಡದ ಮೇಲೆ ಸ್ಟಿಕ್ಕರ್ ಅಂಟಿಸಿದ್ದು, ಅದು ಕಮಲ್ ಹಾಸನ್ ಅವರ ನಿವಾಸವಲ್ಲ, ಅದು ಪಕ್ಷದ ಕಚೇರಿಯಾಗಿದೆ. ಚೆನ್ನೈ ಮಹಾನಗರ ಪಾಲಿಕೆ ಯಾರನ್ನು ಕ್ವಾರಂಟೈನ್ ಗೆ ಒಳಪಡಿಸಲು ಬಯಸಿದೆ..? ಎಂಬ ಬಗ್ಗೆ ನಮಗೆ ಅಚ್ಚರಿ ಮೂಡಿಸಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಯಾರೊಂದಿಗೂ ಮಾತುಕತೆ ನಡೆಸಿಲ್ಲ ತಿಳಿಸಿದ್ದಾರೆ.
.
ಸರ್ಕಾರ ಒಂದೊಮ್ಮೆ ತಮಗೆ ಅನುಮತಿ ನೀಡಿದರೆ ತಮ್ಮ ಕಛೇರಿಯನ್ನು ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ತಾವು ಸಿದ್ದ ಎಂದು ಕಮಲ್ ಹಾಸನ್ ಈಗಾಗಲೇ ಹೇಳಿಕೆ ನೀಡಿರುವುದನ್ನು ವಕ್ತಾರರು ಸ್ಮರಿಸಿದ್ದಾರೆ

ಈ ಕುರಿತು ಪಾಲಿಕೆ ಆಯುಕ್ತ ಪ್ರಕಾಶ್ ಅವರನ್ನು ಪ್ರಶ್ನಿಸಿದಾಗ, ಕಚೇರಿ ಸಹಾಯಕ ಎಸಗಿರುವ ಪ್ರಮಾದದಿಂದ ಇದು ನಡೆದಿದೆ. ಇನ್ನು ಮುಂದೆ ಇಂತಹ ಪ್ರಮಾದ ಉಂಟಾಗುವುದಂತೆ ನೋಡಿಕೊಳ್ಳಲಾಗುವುದು ಭರವಸೆ ನೀಡಿದ್ದಾರೆ.

ಕಮಲ್ ಹಾಸನ್ ಮನೆಯಲ್ಲಿ ಕೆಲಸಮಾಡುವರೊಬ್ಬರು ಇತ್ತೀಚಿಗೆ ವಿದೇಶಕ್ಕೆ ಭೇಟಿ ನೀಡಿ ಬಂದಿದ್ದರು. ಪಾಸ್ ಪೋರ್ಟ್ ವಿಳಾಸ ಆಧಾರ ಮೇಲೆ ಕಮಲ್ ಹಾಸನ್ ಹಳೆಯ ವಿಳಾಸದಲ್ಲಿ ಸ್ಟಿಕ್ಕರ್ ಅಂಟಿಸಲಾಗಿದ್ದು, ಕಮಲ್ ಹಾಸನ್ ಅಲ್ಲಿ ವಾಸವಾಗಿಲ್ಲ ಎಂಬ ಮಾಹಿತಿ ತಿಳಿದ ನಂತರ ಸ್ಟಿಕ್ಕರ್ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಮೂಲಗಳು ಹೇಳಿವೆ.

SCROLL FOR NEXT