ಸಿನಿಮಾ ಸುದ್ದಿ

ಕನ್ನಡದಲ್ಲಿ ಕನ್ನಡಿಗ ಎಸ್ಎಸ್ ರಾಜಮೌಳಿ ಚಿತ್ರ..!, 'ಜಕ್ಕನ್ನ' ಹೇಳಿದ್ದೇನು ಗೊತ್ತಾ?

Srinivasamurthy VN

ಹೈದರಾಬಾದ್: ಎಸ್ ಎಸ್ ರಾಜಮೌಳಿ... ಬಾಹುಬಲಿ ಚಿತ್ರದ ಬಳಿಕ ಈ ಹೆಸರು ಭಾರತೀಯ ಚಿತ್ರರಂಗ ಮಾತ್ರವಲ್ಲದೇ ವಿಶ್ವಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಬಾಹುಬಲಿಯಂತಹ ಹೈ ಬಜೆಟ್ ಚಿತ್ರ ನಿರ್ದೇಶನ ಮಾಡುವ ಮೂಲಕ ರಾಜಮೌಳಿ ಅಂತಾರಾಷ್ಟ್ರೀಯ ಸಿನಿರಂಗ  ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು. ಇಂತಹ ರಾಜಮೌಳಿ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರದ ಕುರಿತು ಕನ್ನಡದಲ್ಲಿ ಮಾತನಾಡಿದ್ದಾರೆ.

ಹೌದು.. ನಿರ್ದೇಶಕ ಎಸ್ ಎಸ್ ರಾಜಮೌಳಿ ಬಾಹುಬಲಿ ಬಳಿಕ ಆರ್ ಆರ್ ಆರ್ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ತೆಲುಗಿನ ಸೂಪರ್ ಸ್ಟಾರ್ ನಟರಾದ ಜೂನಿಯರ್ ಎನ್ ಟಿಆರ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಪುತ್ರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ  ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಆರ್ ಆರ್ ಆರ್ ಚಿತ್ರ ಬಹುಭಾಷಾ ಚಿತ್ರವಾಗಿದ್ದು, ತೆಲುಗು ಮಾತ್ರವಲ್ಲದೇ ಹಿಂದಿ, ಮಲಯಾಳಂ, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ನಾಯಕ ರಾಮ್ ಚರಣ್ ತೇಜ ಜನ್ಮ ದಿನದ ಹಿನ್ನಲೆಯಲ್ಲಿ  ಚಿತ್ರತಂಡ ಒಂದು ಟೀಸರ್ ಬಿಡುಗಡೆ ಮಾಡಿತ್ತು. ಈ ಟೀಸರ್ ಕೂಡ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ಈ ಟೀಸರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ಕೂಡ ಲಭಿಸಿತ್ತು.

ಇದೇ ಕಾರಣಕ್ಕೆ ಜಕ್ಕನ್ನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬುಹೃದಯದ ಧನ್ಯವಾದಗಳು ಎಂದು ಕನ್ನಡದಲ್ಲೇ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಆರ್ ಆರ್ ಆರ್ ಚಿತ್ರಕ್ಕೆ ಕನ್ನಡದಲ್ಲಿ ಭರ್ಜರಿ ಪ್ರಚಾರ ಮಾಡುವ  ಮುನ್ಸೂಚನೆ ನೀಡಿದ್ದಾರೆ.

ಇನ್ನು ಟೀಸರ್ ನಲ್ಲಿ ರಾಮ್ ಚರಣ್ ತೇಜಾ ಅವರ ಪಾತ್ರ ಪರಿಚಯ ಮಾಡಲಾಗಿದ್ದು, ವಿಶೇಷವೆಂದರೆ ಈ ಟೀಸರ್ ಗೆ ಚಿತ್ರದ ಮತ್ತೋರ್ವ ನಾಯಕ ಜೂನಿಯರ್ ಎನ್ ಟಿಆರ್ ಧನಿ ನೀಡಿದ್ದಾರೆ. ಅದೂ ಕೂಡ ಕನ್ನಡದಲ್ಲೇ ಎನ್ ಟಿಆರ್ ಧನಿ ನೀಡಿದ್ದು, ಕನ್ನಡಿಗರ ಖುಷಿ ಡಬಲ್ ಆಗುವಂತೆ  ಮಾಡಿದೆ. ಜೂನಿಯರ್ ಎನ್ ಟಿಆರ್ ಅವರ ತಾಯಿ ಕೂಡ ಕರ್ನಾಟಕದ ಮೂಲದರಾಗಿದ್ದು, ಎನ್ ಟಿಆರ್ ತಮ್ಮ ಬಾಲ್ಯದ ಒಂದಷ್ಟು ವರ್ಷವನ್ನು ಕನ್ನಡ ನೆಲದಲ್ಲೇ ಕಳೆದಿದ್ದರು. ಹೀಗಾಗಿ ಕನ್ನಡಕ್ಕೂ ಎನ್ ಟಿಆರ್ ಗೂ ಅವಿನಾಭಾವ ಸಂಬಂಧವಿದೆ.

SCROLL FOR NEXT