ಸಿನಿಮಾ ಸುದ್ದಿ

ನಾನು ಮಾತಾಡುವುದಕ್ಕಿಂತ ನನ್ನ ಕೆಲಸ ಮಾತಾಡಬೇಕು: ವಿಜಯ ರಾಘವೇಂದ್ರ 

Harshavardhan M

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಟ, ಚಿನ್ನಾರಿ ಮುತ್ತಾ ಎಂದೇ ಜನಪ್ರಿಯತೆ ಗಳಿಸಿರುವ ವಿಜಯ ರಾಘವೇಂದ್ರ ಅವರು 'ಸೀತಾರಾಂ ಬಿನೊಯ್'' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಅವರ 50ನೇ ಚಿತ್ರವಾಗಲಿದೆ. ಸೀತಾರಾಂ ಬಿನೊಯ್ ಸಿನಿಮಾ ತನಿಖಾ ಪತ್ತೇದಾರಿ ಸಿನಿಮಾ ಆಗಿರಲಿದ್ದು, ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. 

ಸಿನಿಮಾ ಆಗಸ್ಟ್ 15ರಂದು ಸುವರ್ಣ ಚಾನೆಲ್ಲಿನಲ್ಲಿ ಪ್ರಸಾರವಾಗಲಿದ್ದು, ಮರುದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. ಇತ್ತೀಚಿಗೆ ಬಿಡುಗಡೆಗೊಂಡಿದ್ದ ಸಿನಿಮಾದ ಟ್ರೇಲರ್ ಕನ್ನಡ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.

ಈ ಸಂದರ್ಭ ನಟ ವಿಜಯ ರಾಘವೇಂದ್ರ ಮಾತನಾಡುತ್ತಾ, ತನ್ನ ಸಿನಿಮಾ ಹೆಚ್ಚು ಜನರನ್ನು ತಲುಪಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಆಸೆ ಮತ್ತು ತುಡಿತ. ಅದರಲ್ಲೂ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಜನರನ್ನು ಸೆಳೆಯುವುದು ಅತಿ ದೊಡ್ಡ ಸವಾಲು ಎಂದು ಅವರು ಹೇಳಿದರು. 

ಮೊದಲ ಹಂತದ ಲಾಕ್ ಡೌನ್ ಕೊನೆಯಾದ ನಂತರ 21 ದಿನಗಳ ಅವಧಿಯಲ್ಲೇ ಸಿನಿಮಾ ಚಿತ್ರೀಕರಣವನ್ನು ಪೂರ್ತಿಗೊಳಿಸಲಾಗಿದೆ ಎನ್ನುವುದು ಮತ್ತೊಂದು ವಿಶೇಷ. 

ಸೀತಾರಾಂ ಬಿನೊಯ್ ಸಿನಿಮಾದ ಕಥೆ ಓರ್ವ ಇನ್ಸ್ ಪೆಕ್ಟರ್ ಕುರಿತಾಗಿದ್ದು, ಆತನನ್ನು ಪದೇ ಪದೆ ವರ್ಗಾವಣೆ ಮಾಡಲಾಗುತ್ತಿರುತ್ತದೆ. ಈ ವರ್ಗಾವಣೆಯಿಂದ ಆತ ತಪ್ಪಿಸಿಕೊಳ್ಳುವುದೇ ಕಥಾಹಂದರದ ತಿರುವು. ಈ ಸಿನಿಮಾ ಯಾವುದೇ ಪರಭಾಷೆಯ ರೀಮೇಕ್ ಅಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸಿನಿಮಾ ಬಗ್ಗೆ ತಾವೇ ಹೆಚ್ಚು ಹೇಳುವುದಕ್ಕಿಂತ ಖುದ್ದು ಸಿನಿಮಾನೇ ಮಾತಾಡಿದರೆ ಚೆನ್ನ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.  

SCROLL FOR NEXT