ಸಿನಿಮಾ ಸುದ್ದಿ

ಅವಕಾಶಗಳು ನಮ್ಮನ್ನರಸಿ ಬಂದಾಗ ಸುಮ್ಮನೆ ಕೂರಬಾರದು: ನಟ ಧನಂಜಯ್ ಟಾಕಿಂಗ್

Harshavardhan M

ಬೆಂಗಳೂರು: ಆಗಸ್ಟ್ ತಿಂಗಳು ನಟ ಧನಂಜಯ್ ಅವರಿಗೆ ಬ್ಯುಸಿ ತಿಂಗಳು. 'ಬಡವ ರಾಸ್ಕಲ್' ಸಿನಿಮಾದ  'ಉಡುಪಿ ಹೋಟೆಲು' ಹಾಡು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಒಂದೆಡೆಯಾದರೆ, ಮಾನ್ಸೂನ್ ರಾಗಾ ಮತ್ತು ರತ್ನನ್ ಪ್ರಪಂಚ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದರ ಸಂತಸ ಮತ್ತೊಂದೆಡೆ. ಅಲ್ಲದೆ ಸಾಲು ಸಾಲು ಸಿನಿಮಾ ಅವಕಾಶಗಳು ಧನಂಜಯ್ ಅವರನ್ನು ಆಗಸ್ಟ್ ತಿಂಗಳಲ್ಲಿ ಹುಡುಕಿಕೊಂಡು ಬಂದಿದ್ದೇ ಅವರು ಬ್ಯುಸಿಯಾಗಲು ಕಾರಣ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೊಳ್ಳೆ ಕಥೆಯುಳ್ಳ ಸಿನಿಮಾ ಅವಕಾಶಗಳು ಅವರನ್ನರಸಿ ಬಂದಿದ್ದು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. 

ಕೊರೊನಾ ಸಾಂಕ್ರಾಮಿಕ ನಡುವೆ ಕೊರೊನಾ ಮಾರ್ಗಸೂಚಿಯ ನಿಯಮಾನುಸಾರ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಅವರು ಸಿನಿಮಾ ಸೆಟ್ ನಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ಎನ್ನುವುದು ವಿಶೇಷ. ಸದ್ಯ  ಧನಂಜಯ್ ಅವರು ನಿರ್ದೇಶಕ ವಿಜಯ್ ಮಿಲ್ಟನ್ ಅವರ ತಮಿಳು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ.
ಇವೆಲ್ಲದರ ನಡುವೆ ಅವರು 'ಸಲಗ' ಚಿತ್ರ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. 

ಕೆಲಸ ಕಾರ್ಯಗಳ ನಡುವೆ ಮಾತಿಗೆ ಸಿಕ್ಕ ಅವರು ತಮ್ಮ ಕಾರ್ಯ ವೈಖರಿಯ ಝಲಕ್ ಅನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಕೆಲಸದ ಬಗ್ಗೆ ಅವರು ಹೇಳಿದ್ದಿಷ್ಟು. 'ಏನೂ ಮಾಡದೆ ಸುಮ್ಮನೆಯೇ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಅದರಲ್ಲೂ ಒಳ್ಳೊಳ್ಳೆ ಅವಕಾಶಗಳು ಎದುರಾದಾಗಲಂತೂ ಸುಮ್ಮನೆ ಕೂರಬಾರದು. ಯಾವುದೇ ಉದ್ಯೋಗ ಕ್ಷೇತ್ರವಾಗಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಾನಂತೂ ನನ್ನ ಹಾದಿಯಲ್ಲಿ ಬಂದ ಒಳ್ಳೆ ಅವಕಾಶಗಳನ್ನು ಮಿಸ್ ಮಾಡಿಕೊಂಡಿಲ್ಲ. ಬಾಚಿ ತಬ್ಬಿಕೊಂಡಿದ್ದೇನೆ.' ಎಂದವರು ಹೇಳಿದ್ದಾರೆ. 

SCROLL FOR NEXT