ಸಿನಿಮಾ ಸುದ್ದಿ

ಇಂದು ಸಂಚಾರಿ ವಿಜಯ್‌ ಜನ್ಮದಿನ: ಅಗಲಿದ ನಾಯಕನ ನೆನೆದ ಸ್ಯಾಂಡಲ್ ವುಡ್, 'ಲಂಕೆ’ ಚಿತ್ರದ ಪೋಸ್ಟರ್ ಬಿಡುಗಡೆ

Manjula VN

ಬೆಂಗಳೂರು: ಶನಿವಾರ ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್‌ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಸ್ಯಾಂಡಲ್'ವುಡ್ ನ ಹಲವಾರು ನಟರು ವಿಜಯ್‌ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ. 

ಜೂನ್‌ 12ರ ರಾತ್ರಿ ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಜಯ್‌ ಜೂನ್‌ 15ರ ಮುಂಜಾನೆ 3.44ಕ್ಕೆ ಕೊನೆಯುಸಿರೆಳೆದಿದ್ದರು. 

ಅಪಘಾತದ ಬಳಿಕ ಮಿದುಳು ನಿಷ್ಕ್ರಿಯಗೊಂಡ ಕಾರಣ, ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದ್ದರು. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ವಿಜಯ್‌, ಅವರ ಏಳು ಅಂಗಾಂಗಳನ್ನು ದಾನ ಮಾಡಲಾಗಿತ್ತು. ಇದರೊಂದಿಗೆ ವಿಜಯ್ ಅವರು 7 ಜನರಿಗೆ ಜೀವ ನೀಡಿದ್ದರು. 

ವಿಜಯ್‌ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚೇನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. 

ಇಂದು ವಿಜಯ್ ಅವರ ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಸ್ಯಾಂಡಲ್'ವುಡ್'ನ ನಟರು, ಗೆಳೆಯರು ವಿಜಯ್ ಅವರೊಂದಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ. 

‘ನಿನ್ನ ವಿಚಾರಗಳು, ನಿನ್ನ ಪ್ರೀತಿ, ನಿನ್ನ ಗೆಳೆತನ ಎಂದೆಂದಿಗೂ ಅಮರ...’ ಎಂದು ನಟ ಸತೀಶ್‌ ನೀನಾಸಂ ಆತ್ಮೀಯ ಗೆಳೆಯನನ್ನು ನೆನಪಿಸಿಕೊಂಡಿದ್ದಾರೆ. 

‘ಜನ್ಮದಿನದ ಶುಭಾಶಯಗಳು ಗೆಳೆಯ...ಮಿಸ್ ಯೂ’ ಎಂದು ನಟ ಪ್ರೇಮ್‌ ಅವರು ಸಾಮಾಜಿಕ ಜಾಲಟಾಣ ಟ್ವಿಟರ್ ನಲ್ಲಿ ಟ್ವೀಟ್‌ ಮಾಡಿದ್ದಾರೆ. ಇದರಂತೆ ನೂರಾರು ಅಭಿಮಾನಿಗಳೂ  ತಮ್ಮ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಈ ನಡುವೆ ಸಂಚಾರಿ ವಿಜಯ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಲಂಕೆ ಚಿತ್ರದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಲಾಗಿದೆ. 

ನಟ ಲೂಸ್‌ಮಾದ ಯೋಗೇಶ್ ನಾಯಕನಾಗಿ ನಟಿಸಿರುವ ‘ಲಂಕೆ’ ಚಿತ್ರದಲ್ಲಿ ವಿಜಯ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್‌ ತಿಂಗಳಿನಲ್ಲಿ ‘ಲಂಕೆ’ ಚಿತ್ರ ತೆರೆಗೆ ಬರಲಿದೆ. ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಇದಲ್ಲದೆ, ಪಂಚ ಭಾಷೆಯಲ್ಲಿ ತಯಾರಾಗುತ್ತಿರುವ ಸಂಚಾರಿ ವಿಜಯ್‌ ಅವರ ಬಹುನಿರೀಕ್ಷಿತಾ ‘ಪಿರಂಗಿಪುರ’ ಚಿತ್ರದ ಒಂದು ವೀಡಿಯೊ ಹಾಗೂ ಪೋಸ್ಟರ್ ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಇದರ ಜೊತೆಗೆ ಚಿತ್ರದ ತಂದ ಸೈಲೆಂಟ್ ಸ್ಟಾರ್ ಎಂಬ ಬಿರುದು ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. 

SCROLL FOR NEXT