ಸಿನಿಮಾ ಸುದ್ದಿ

ವೀಕ್ಷಕರನ್ನು ಮತ್ತೆ ರಂಜಿಸಲು ಬರುತ್ತಿದೆ ಟಿ.ಎನ್‌. ಸೀತಾರಾಮ್ ನಿರ್ದೇಶನದ 'ಮಾಯಾಮೃಗ' ಧಾರಾವಾಹಿ!

Shilpa D

1988 ರಲ್ಲಿ ಡಿಡಿ ಚಂದನವಾಹಿನಿಯಲ್ಲಿ ಮನೆಮಾತಾಗಿದ್ದ ಪ್ರಸಿದ್ಧ ಧಾರಾವಾಹಿ ಮಾಯಾಮೃಗ ಮತ್ತೆ ವೀಕ್ಷಕರನ್ನು ರಂಜಿಸಲು ಬರುತ್ತಿದೆ. ಪ್ರಸಿದ್ಧ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಮಾಯಾಮೃಗ ಧಾರಾವಾಹಿ ಜೂನ್ 4 ರಿಂದ ವೆಬ್ ಸೀರೀಸ್ ಆಗಿ ಪ್ರಸಾರವಾಗಲಿದೆ.

90ರ ದಶಕದ, ಕನ್ನಡಿಗರ ಮನ ಮಿಡಿತ, ದೂರದರ್ಶನ ಮಾಧ್ಯಮದಲ್ಲೇ ಇತಿಹಾಸ ನಿರ್ಮಿಸಿದ ಕನ್ನಡ ಪ್ರಥಮ ಮೆಗಾ ಧಾರಾವಾಹಿ ‘ಮಾಯಾಮೃಗ’, ಈಗ ವೆಬ್ ಸರಣಿಯ ರೂಪದಲ್ಲಿ ಯುಟ್ಯೂಬ್ ಮುಖಾಂತರ ಪ್ರಸಾರಗೊಳ್ಳಲು ಸಿದ್ಧವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಟಿ.ಎನ್. ಸೀತಾರಾಮ್, ‘ಒಂದು ವಾರದ 5 ಎಪಿಸೋಡ್‌ಗಳನ್ನು ಒಟ್ಟಿಗೇ ಜೂ.4ರಂದು ಬಿಡುಗಡೆ ಮಾಡುತ್ತಿದ್ದೇವೆ. ಪ್ರತಿ ವಾರ ಐದು ಎಪಿಸೋಡ್‌ಗಳ ಪ್ರಸಾರವಾಗುತ್ತದೆ. ಈಗಿನ ಕಾಲಕ್ಕೆ ಸರಿಹೊಂದುವ ಹಾಗೆ ಸಂಭಾಷಣೆಗಳನ್ನು ಕೊಂಚ ಎಡಿಟ್ ಮಾಡಲಾಗಿದೆ’ ಎಂದು  ನಿರ್ದೇಶಕ ಟಿಎನ್ ಸೀತಾರಾಮ್ ಹೇಳಿದ್ದಾರೆ.

ಅಂದು ತೀರಾ ಮುಗ್ಧತೆಯಲ್ಲಿ ಧಾರಾವಾಹಿ ತಯಾರಿಸಲಾಗಿತ್ತು. ಕಲರ್ ಮತ್ತು ಉತ್ತಮ ಆಡಿಯೋ ಗಾಗಿ ಕೆಲ ತಾಂತ್ರಿಕ ಕೆಲಸಗಳನ್ನು ಮಾಡಲಾಗಿದೆ ಎಂದು ಸೀತಾರಾಮ್ ತಿಳಿಸಿದ್ದಾರೆ. ಈ ಧಾರಾವಾಹಿ ಹಳೇಯ ಫೋಟೋವನ್ನು ನೋಡುವಂತಿದೆ, ಪ್ರೇಕ್ಷಕರು ಮತ್ತೆ ಸಿಹಿ-ಕಹಿ ಭಾವನೆಗಳನ್ನು ಹಂಚಿಕೊಳ್ಳಬಹುದಾಗಿದೆ. ತಮ್ಮ ಮಕ್ಕಳಿಗೆ ಈ ಧಾರಾವಾಹಿ ತೋರಿಸಲು ಹಲವು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ಹಿಂದಿನ ವರ್ಷ ಲಾಕ್ ಡೌನ್ ಸಮಯದಲ್ಲಿ  ನನ್ನ ಮಗಳು ಜಾನಕಿ ಧಾರವಾಹಿಯನ್ನು ನಿಲ್ಲಿಸಬೇಕಾಯಿತು, ಹೀಗಾಗಿ ನನ್ನ ಹಳೇಯ ಧಾರಾವಾಹಿಗಳನ್ನು ಗಮನಿಸಿದಾಗ ಮಾಯಾಮೃಗ ಮತ್ತೆ ಪ್ರಸಾರ ಮಾಡುವುದು ಸರಿಯೆನಿಸಿತು, ಆದರೆ ಹಳೇಯ ಕಥೆಯನ್ನು ಮತ್ತೆ ಮರು ಪ್ರಸಾರ ಮಾಡಲು ಟಿವಿ ಚಾನೆಲ್ ಗಳು ಒಪ್ಪುವುದಿಲ್ಲ, ಹೀಗಾಗಿ ಭೂಮಿಕಾ ಟಾಕೀಸ್ ಅಡಿಯಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಬ್ಬರು ಮಧ್ಯಮ ವರ್ಗದ ಹೆಣ್ಣು ಮಕ್ಕಳು ಮತ್ತವರ ಕುಟುಂಬದ ಸುತ್ತ ಸುತ್ತುವ ಕಥೆ 'ಮಾಯಾಮೃಗ'. ದತ್ತಾತ್ತೇಯ, ಮುಖ್ಯಮಂತ್ರಿ ಚಂದ್ರು, ಎಸ್.ಎನ್.ಸೇತುರಾಮ್, ವೈಶಾಲಿ ಕಾಸರವಳ್ಳಿ, ಎಂ.ಡಿ.ಪಲ್ಲವಿ, ಲಕ್ಷ್ಮೀ ಚಂದ್ರಶೇಖರ್, ಮಾಳವಿಕಾ ಅವಿನಾಶ್, ಮಂಜುಭಾಷಿಣಿ, ಅವಿನಾಶ್ ಮುಂತಾದವರ ಅಭಿನಯಿಸಿದ್ದು, ಸೀತಾರಾಮ್ ಅವರು ವಕೀಲರ ಪಾತ್ರದಲ್ಲಿ ನಟಿಸಿದ್ದಾರೆ.

36 ಜನರನ್ನು ಒಳಗೊಂಡ ಪಾತ್ರವರ್ಗ ಮತ್ತು ಸಿಬ್ಬಂದಿ ಜೂಮ್‌ನಲ್ಲಿ ಪ್ರೇಕ್ಷಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಮತ್ತು ಕಾರ್ಯಕ್ರಮದ ಮರು-ಪ್ರಸಾರ ಪ್ರಾರಂಭವಾಗುವ ಮುನ್ನ, ಮೊದಲ ಕಂತು ಶುಕ್ರವಾರ ಸಂಜೆ 5:45 ಕ್ಕೆ ಪ್ರಸಾರವಾಗಲಿದೆ. ನಾವು ಇಂದಿನ ಪೀಳಿಗೆಯೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತೇವೆ, ಪ್ರತಿ ಸಂಚಿಕೆಯಲ್ಲಿ ಐದು ಗುಂಪುಗಳಾಗಿ ಕಲಾವಿದರು ಮತ್ತು ತಂತ್ರಜ್ಞರು  ಸಂವಾದದಲ್ಲಿ ಭಾಗವಹಿಸುತ್ತಾರೆ ಎಂದು ನಿರ್ದೇಶಕರು ಹೇಳುತ್ತಾರೆ.

SCROLL FOR NEXT