ಸಿನಿಮಾ ಸುದ್ದಿ

ಬಂಗಾಳಿ ಚಲನಚಿತ್ರ ನಿರ್ದೇಶಕ ಬುದ್ಧ ದೇವ್‌ ದಾಸ್‌ ಗುಪ್ತಾ ನಿಧನ: ಪ್ರಧಾನಿ ಮೋದಿ, ಸಿಎಂ ಮಮತಾ ಸಂತಾಪ

Nagaraja AB

ಕೊಲ್ಕತ್ತಾ: ಬಂಗಾಳಿ ಸುಪ್ರಸಿದ್ದ ಚಲನ ಚಿತ್ರ ನಿರ್ದೇಶಕ ಬುದ್ಧದೇವ್‌ ದಾಸಗುಪ್ತ ದಕ್ಷಿಣ ಕೊಲ್ಕತ್ತಾದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ದಾಸಗುಪ್ತ ಅವರು ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಿದ್ರೆಯಲ್ಲಿದ್ದಾಗಲೇ ಮೃತಪಟ್ಟಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ದೀರ್ಘಕಾಲದಿಂದ ಬಳಲುತ್ತಿದ್ದ ಅವರು, ಡಯಾಲಿಸಿಸ್‌ ಗೆ ಒಳಗಾಗುತ್ತಿದ್ದರು.

ದಾಸ್‌ ಗುಪ್ತಾ ಚಲನ ಚಿತ್ರ ನಿರ್ದೇಶಕರಾಗಿ ಹೆಸರುವಾಸಿಯಾಗಿದ್ದರೂ, ಬಂಗಾಳಿ ಭಾಷೆಯಲ್ಲಿ ಅತ್ಯುತ್ತಮ ಕವಿಯೂ ಆಗಿದ್ದರು. ಅವರು ಹಲವು ಕವನಗಳನ್ನು ರಚಿಸಿದ್ದರು.ಅವರ ಹಲವು ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದರು. 

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಾಸ್‌ ಗುಪ್ತ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಬುದ್ಧ ದೇವ್‌ ಅವರ ನಿಧನ ತಮಗೆ ತೀವ್ರ ದುಃಖ ತಂದಿದೆ.ಚಿತ್ರ ಜಗತ್ತಿಗೆ ಅವರ ನಿಧನ ತುಂಬಲಾರದ ನಷ್ಟಉಂಟುಮಾಡಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿ, ದುಃಖ ತಪ್ತ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಾಂತ್ವಾನ ಹೇಳಿದ್ದಾರೆ.

ಪ್ರಧಾನಿ ಸಂತಾಪ: ಚಲನಚಿತ್ರ ನಿರ್ಮಾಪಕ, ಚಿಂತಕ ಮತ್ತು ಕವಿ ಬುದ್ಧದೇವ್ ದಾಸ್‌ಗುಪ್ತಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ''ಶ್ರೀ ಬುದ್ಧದೇಬ್ ದಾಸ್‌ಗುಪ್ತಾ ಅವರ ನಿಧನದಿಂದ ದುಃಖವಾಗಿದೆ. ಅವರ ವೈವಿಧ್ಯಮಯ ಕೃತಿಗಳು ಸಮಾಜದ ಎಲ್ಲಾ ವರ್ಗಗಳ ಜೊತೆಗೂಡಿವೆ. ಅವರು ಪ್ರಖ್ಯಾತ ಚಿಂತಕರಾಗಿದ್ದರು ಮತ್ತು ಕವಿ. ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಹಲವಾರು ಅಭಿಮಾನಿಗಳೊಂದಿಗೆ ಇವೆ ಎಂದಿದ್ದಾರೆ.

SCROLL FOR NEXT