ಸಿನಿಮಾ ಸುದ್ದಿ

ಸಿಎಂ ಸಂತಾಪ: ಆದರೆ ಸಂಚಾರಿ ವಿಜಯ್‌ಗೆ ಚಿಕಿತ್ಸೆ ಮುಂದುವರೆದಿದೆ ಎಂದ ಅಪೋಲೋ ಆಸ್ಪತ್ರೆ ವೈದ್ಯರು

Vishwanath S

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಂತಾಪ ಸೂಚಿಸಿದ್ದು ಇದರ ಬೆನ್ನಲ್ಲೇ ಅಪೋಲೋ ಆಸ್ಪತ್ರೆ ವೈದ್ಯರು ವಿಜಯ್ ಮೃತಪಟ್ಟಿರುವುದಾಗಿ ನಾವು ಘೋಷಿಸಿಲ್ಲ. ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ. 

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಯಡಿಯೂರಪ್ಪನವರು ಸಂಚಾರಿ ವಿಜಯ್ ಅವರಿಗೆ ಸಂತಾಪ ಸೂಚಿಸಿದ್ದರು. ಅಲ್ಲದೆ ಅವರ ಅಗಲಿಕೆಯನ್ನು ಬರಿಸುವ ಶಕ್ತಿ ಅವರು ಕುಟುಂಬಕ್ಕೆ ನೀಡಲಿ ಎಂದು ಹೇಳಿದ್ದರು. 

ಇದರ ಬೆನ್ನಲ್ಲೇ ಆಸ್ಪತ್ರೆಯ ವೈದ್ಯರು ವಿಜಯ್ ಮೃತಪಟ್ಟಿರುವುದಾಗಿ ಆಸ್ಪತ್ರೆ ಅಧಿಕೃತವಾಗಿ ಘೋಷಿಸಿಲ್ಲ. ಅಪಘಾತದಿಂದಾಗಿ ಅವರ ಮೆದುಳು ನಿಷ್ಕ್ರಿಯಗೊಂಡಿರುವುದು ನಿಜ. ಆದರೆ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅವರ ಇತರ ಅಂಗಗಳು ಕಾರ್ಯನಿರ್ವಹಿಸುತ್ತಿವೆ. ಮೆದುಳು ನಿಷ್ಕ್ರಿಯ ಎಂದಾಕ್ಷಣ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಲು ಆಗಲ್ಲ. ಹೃದಯ ಬಡಿತ ನಿಂತಾಗ ಮಾತ್ರ ಮೃತ ಎಂದು ಹೇಳಬಹುದು ಎಂದು ಅಪೋಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಅರುಣ್ ನಾಯ್ಕ್ ತಿಳಿಸಿದ್ದಾರೆ. 

ಇನ್ನು ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಅವರ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ. 

ವಿಜಯ್ ಅವರು ಶನಿವಾರ ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅವರ ಬಲಗಾಲು ಮತ್ತು ತಲೆಗೆ ಭೀಕರ ಗಾಯಗಳಾಗಿತ್ತು. ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಅವರ ತಲೆಗೆ ಗಂಭೀರ ಗಾಯವಾಗಿದ್ದನ್ನು ಗಮನಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. 36 ಗಂಟೆಗಳಿಂದಲೂ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು ಅವರ ಮೆದುಳು ಮಾತ್ರ ಯಾವುದಕ್ಕೂ ಸ್ಪಂಧಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

SCROLL FOR NEXT