ಸಿನಿಮಾ ಸುದ್ದಿ

ತಂದೆಯ ತಾರಾವರ್ಚಸ್ಸಿಗೆ ತಕ್ಕನಾದ ನಟನಾಗಲು ಬಯಸುತ್ತೇನೆ: ತೇಜ್ ಚರಣರಾಜ್

Vishwanath S

ದಕ್ಷಿಣ ಭಾರತದ ಪ್ರಸಿದ್ಧ ನಟ ಚರಣ್ ರಾಜ್ ಪುತ್ರ ತೇಜ್ ಚರಣರಾಜ್ ಸ್ಯಾಂಡಲ್ವುಡ್ ನಲ್ಲಿ ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. 

ಇನ್ನು ಚಂದನ್ ರಾಜ್ ರ ಚೊಚ್ಚಲ ನಿರ್ದೇಶನ ಆ್ಯಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ನಟಿಸಲು ತೇಜ್ ಸಜ್ಜಾಗಿದ್ದಾರೆ. ಬೆರಳೆಣಿಕೆಯ ಚಿತ್ರಗಳೊಂದಿಗೆ ತಮಿಳು ಭಾಷೆಯಲ್ಲಿ ಛಾಪು ಮೂಡಿಸಿರುವ ತೇಜ್, ಮಂಜು ಮಾಂಡವ್ಯ ನಿರ್ದೇಶಿಸಿದ್ದ ಶ್ರೀ ಭರತ ಬಾಹುಬಲಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೇಗಾದರೂ ಮಾಡಿ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಛಾಪು ಮೂಡಿಸುವ ಆಕಾಂಕ್ಷೆ ಹೊಂದಿರುವುದಾಗಿ ತೇಜ್ ಹೇಳುತ್ತಾರೆ.

ಶ್ರೀ ಭರತ ಬಾಹುಬಲಿಯಲ್ಲಿನ ಅತಿಥಿ ಪಾತ್ರ ಅನಿರೀಕ್ಷಿತವಾಗಿತ್ತು. ನನ್ನ ತಂದೆಯ ಆಪ್ತರಾಗಿರುವ ಮಂಜು ಮಾಂಡವ್ಯ ಅವರು ನನ್ನನ್ನು ಚಿತ್ರದಲ್ಲಿ ನೋಡಬೇಕು ಎಂದು ಬಯಸಿ ಅಥಿತಿ ಪಾತ್ರವನ್ನು ಸೃಷ್ಟಿಸಿದ್ದರು. ಇನ್ನು ಆ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಚಂದನ್ ರಾಜ್ ಪರಿಚಯವಾಯಿತು. ಚಂದನ್ ಸಹ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದರು. ಅವರ ಕಥೆಯ ಕಲ್ಪನೆ ನನಗೆ ಇಷ್ಟವಾಯಿತು. ಹೀಗಾಗಿ ಚಿತ್ರೀಕರಣಕ್ಕೆ ಸಿದ್ಧವಾಗಿದೆ ಎಂದು ತೇಜ್ ಹೇಳುತ್ತಾರೆ. 

ನಿಜ ಜೀವನದ ಘಟನೆಗಳ ಆಧಾರದ ಮೇಲೆ ಚಂದನ್ ಸ್ಕ್ರಿಪ್ಟ್ ಮಾಡಿದ್ದಾರೆ. ತೇಜ್ ಕಳೆದ ಒಂದು ವರ್ಷದಿಂದ ಪಾತ್ರಕ್ಕೆ ತಯಾರಿ ನಡೆಸಿದ್ದಾರೆ. ಜೊತೆಗೆ ಕನ್ನಡವನ್ನು ನಿರರ್ಗಳವಾಗಿ ಮಾತನಾಡುವುದನ್ನು ಅಭ್ಯಸಿಸುತ್ತಿದ್ದಾರೆ. ನಾನು ಮಹಾರಾಷ್ಟ್ರದಲ್ಲಿ ಜನಿಸಿದ್ದು, ನನ್ನ ಪೋಷಕರು ಚೆನ್ನೈನಲ್ಲಿ ನೆಲೆಸಿದ್ದರು. ಹೆಚ್ಚಾಗಿ ಬೇಸಿಗೆ ರಜಾದಿನಗಳಲ್ಲಿ ಮಾತ್ರ ಬೆಂಗಳೂರಿಗೆ ಬರುತ್ತಿದ್ದೇವು. ನಾನು ಕನ್ನಡವನ್ನು ಕಲಿಯುತ್ತಿರುವುದಾಗಿ ಹೇಳಿದ್ದಾರೆ. 

ನನ್ನ ತಂದೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಪರಂಪರೆಯನ್ನು ಹೊಂದಿದ್ದಾರೆ. ಪ್ರಮುಖ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಇಂದಿಗೂ ಇಲ್ಲಿ ಉತ್ತಮ ಹೆಸರನ್ನು ಹೊಂದಿದ್ದಾರೆ. ಅವರ ಮಗನಾಗಿ ಅವರಂತೆ ಪರಿಪೂರ್ಣನಾಗಿರಲು ಪ್ರಯತ್ನಿಸುವುದು ನನ್ನ ಕರ್ತವ್ಯ. ಆದರೆ ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದರು.

SCROLL FOR NEXT