ಸಿನಿಮಾ ಸುದ್ದಿ

ಸಂಚಾರಿ ವಿಜಯ್ ಗೆ ಅಂದು ರಾತ್ರಿ ಆಗಿದ್ದೇನು? ಅವರ ಆರೋಗ್ಯ ಸ್ಥಿತಿ ಸದ್ಯ ಹೇಗಿದೆ?

Sumana Upadhyaya

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಟ ಸಂಚಾರಿ ವಿಜಯ್ ಅವರಿಗೆ ಎರಡು ದಿನಗಳ ಹಿಂದೆ ಆದ ತೀವ್ರ ರಸ್ತೆ ಅಪಘಾತದಲ್ಲಿ ಮೆದುಳಿಗೆ ಮತ್ತು ತೊಡೆಗೆ ಗಾಯವಾಗಿ ಆಸ್ಪತ್ರೆ ಸೇರಿದ್ದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅವರ ಆರೋಗ್ಯ ಕ್ಷಣಕ್ಷಣಕ್ಕೆ ಕ್ಷೀಣಿಸುತ್ತಾ ಹೋಗುತ್ತಿದೆ, ಚೇತರಿಕೆ ಪ್ರಮಾಣ ಕಡಿಮೆ ಎಂದು ಸಂಚಾರಿ ವಿಜಯ್ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮೆದುಳಿನ ಭಾಗಕ್ಕೆ ಗಂಭೀರ ಗಾಯಗಳಾಗಿ ವಿಪರೀತ ರಕ್ತಸ್ರಾವವಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಆಗಿದ್ದೇನು?: ಈ ಕೋವಿಡ್ ಸಂಕಷ್ಟದಲ್ಲಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಕಷ್ಟದಲ್ಲಿರುವವರಿಗೆ ಫುಡ್ ಕಿಟ್, ಹಣ ಸಹಾಯ ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಮೊದಲಿನಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಸಂಚಾರಿ ವಿಜಯ್ ಅವರ ತಂಡವೂ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯದಲ್ಲಿ ಸಕ್ರಿಯವಾಗಿತ್ತು.

ಮೊನ್ನೆ 12ರಂದು ರಾತ್ರಿ ತಮ್ಮ ಸ್ನೇಹಿತ ನವೀನ್ ಎಂಬುವವರ ಮನೆಗೆ ಹೋಗಿ ಫುಡ್ ಕಿಟ್ ವಿತರಿಸುವ ಬಗ್ಗೆ ಮಾತುಕತೆ ನಡೆಸಿ ತಡರಾತ್ರಿ ಹೊರಟಿದ್ದರಂತೆ. ಸ್ನೇಹಿತ ನವೀನ್ ತನ್ನ ಬೈಕ್ ನಲ್ಲಿ ವಿಜಯ್ ಅವರನ್ನು ಡ್ರಾಪ್ ಮಾಡಲು ಬಂದಿದ್ದರು, ಸಂಚಾರಿ ವಿಜಯ್ ಅವರು ಬೈಕ್ ನಲ್ಲಿ ಹಿಂದೆ ಕುಳಿತಿದ್ದರು.

ಸ್ವಲ್ಪ ದೂರ ಹೋದ ಮೇಲೆ ಬೈಕ್ ಸ್ಕಿಡ್ ಆಗಿ ಎಡಬದಿಯಲ್ಲಿ ಕರೆಂಟ್ ಪೋಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ, ಹೆಲ್ಮೆಟ್ ಧರಿಸಿರಲಿಲ್ಲ, ಇದೇ ಮಾಡಿರುವ ಮಹಾ ಪ್ರಮಾದ ಎನ್ನಬಹುದು. ಬಿದ್ದ ಪೆಟ್ಟಿಗೆ ಹಿಂದೆ ಕುಳಿತಿದ್ದ ಸಂಚಾರಿ ವಿಜಯ್ ಅವರ ಮೆದುಳು ಮತ್ತು ತೊಡೆಗೆ ತೀವ್ರ ಪೆಟ್ಟಾಗಿದೆ.

ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಂಚಾರಿ ವಿಜಯ್ ಅವರ ಸೋದರ ಸಿದ್ಧೇಶ್ ಕುಮಾರ್, ವಿಜಯ್​ ನಮ್ಮ ಕುಟುಂಬದ ಆಧಾರಸ್ತಂಭ. ಆತ ಸುಮ್ಮನೆ ಕೂರುವ ವ್ಯಕ್ತಿ ಅಲ್ಲವೇ ಅಲ್ಲ. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ. ಶನಿವಾರವೂ (ಜೂನ್​ 12) ಅಂತಹುದೇ ಕೆಲಸ ಮುಗಿಸಿ ಬರುವಾಗ ಅವಘಡವಾಗಿದೆ. ವೈದ್ಯರು 48 ಗಂಟೆ ಅಬ್ಸರ್ವರ್ವೇಷನ್ ನಲ್ಲಿ ಇರಿಸಿದ್ದಾರೆ. ನಾಳೆಗೆ 48 ಗಂಟೆ ಕಂಪ್ಲೀಟ್ ಆಗಲಿದೆ. ದಯವಿಟ್ಟು ನನ್ನ ಸಹೋದರನಿಗಾಗಿ ಪ್ರಾರ್ಥಿಸಿ’ ಎಂದು ಕೋರಿದ್ದಾರೆ.

SCROLL FOR NEXT