ಸಿನಿಮಾ ಸುದ್ದಿ

'ಯಜಮಾನ'ನ ಮನವಿಗೆ ಅಪಾರ ಸ್ಪಂದನೆ: ಮೃಗಾಲಯಕ್ಕೆ ಬಂದ ದೇಣಿಗೆ ಎಷ್ಟು ಗೊತ್ತೆ?

Shilpa D

ಮೈಸೂರು: ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಎಲ್ಲ ರಾಜ್ಯದ ಮೃಗಾಲಯಗಳನ್ನು ಬಂದ್ ಮಾಡಲಾಗಿತ್ತು. ಆ ಹಿನ್ನೆಲೆಯ ಮೃಗಾಲಯ ಪ್ರಾಧಿಕಾರಕ್ಕೆ ದೊಡ್ಡ ನಷ್ಟವೇ ಉಂಟಾಗಿತ್ತು. 

ಅದರಿಂದ ಪ್ರಾಣಿ-ಪಕ್ಷಿಗಳ ನಿರ್ವಹಣೆಯೂ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಮನವಿ ಮಾಡಿದ್ದರು. ರಾಜ್ಯದ 9 ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದು, ಅವುಗಳ ನಿರ್ವಹಣೆಗೆ ಸಹಾಯ ಮಾಡಿ ಎಂದು ವಿಡಿಯೋ ಮೂಲಕ ತಿಳಿಸಿದ್ದರು. 

ದರ್ಶನ್ ಮನವಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕಳೆದ 20 ದಿನಗಳಲ್ಲಿ ಸುಮಾರು 3 ಕೋಟಿ ರು. ಹಣ ದೇಣಿಗೆಯಾಗಿ ಬಂದಿದೆ. ದರ್ಶನ್ ಕರೆ ನೀಡುತ್ತಿದ್ದಂತೆಯೇ ಅಭಿಮಾನಿಗಳಿಂದ ಲಕ್ಷ ಲಕ್ಷ ಹಣ ದೇಣಿಗೆ ರೂಪದಲ್ಲಿ ಮೃಗಾಲಯಕ್ಕೆ ಹರಿದುಬಂದಿತ್ತು. ರಾಜ್ಯದ 9 ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು Zoos of Karnataka ಆ್ಯಪ್ ಮೂಲಕ ಸುಮಾರು 6 ಸಾವಿರ ಜನರು ದತ್ತು ಪಡೆದಿದ್ದಾರೆ. ಬರೀ ದರ್ಶನ್‌ ಅಭಿಮಾನಿಗಳು ಮಾತ್ರವಲ್ಲದೆ, ಸಿನಿಮಾ ಕಲಾವಿದರು ಕೂಡ ದತ್ತು ಪಡೆದುಕೊಂಡಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವ ಸ್ವಾಮಿ ತಿಳಿಸಿದ್ದಾರೆ.

ಇನ್ನೂ ದರ್ಶನ್ ಅವರ ಈ ಕಾರ್ಯಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಮೃಗಾಲಯಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಅನ್‌ಲಾಕ್‌ ಶುರುವಾಗಿರುವುದರಿಂದ, ನಿಧಾನವಾಗಿ ಮೃಗಾಲಯಗಳು ತೆರೆಯುತ್ತಿವೆ. ಬೆಳಗಾವಿ, ಗದಗ, ಹಂಪಿಯ ಮೃಗಾಲಯಗಳನ್ನು ತೆರೆಯಲಾಗಿದೆ. ಕೊವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ.

SCROLL FOR NEXT