ಸಿನಿಮಾ ಸುದ್ದಿ

ಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'

Lingaraj Badiger

ಬೆಂಗಳೂರು: ಖ್ಯಾತ ನಟ ಕುಮಾರ್ ಗೋವಿಂದ್ ಅವರಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧೆಯಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಲಭ್ಯವಾಗಿದೆ.

ಅಮೆರಿಕ 'ಡಲ್ಲಾಸ್ ಆಕ್ಟಿಂಗ್ ಅಂತರಾಷ್ಟ್ರೀಯ ಚಿತ್ರೋತ್ಸವ'ಕ್ಕೆ 2016ರಿಂದ ಈಚೆಗೆ ನಿರ್ಮಾಣಗೊಂಡ ಚಿತ್ರಗಳನ್ನು ಆಹ್ವಾನಿಸಲಾಗಿತ್ತು. ಈ ಚಿತ್ರೋತ್ಸವವು ನಟ-ನಟಿಯರ ಅಭಿನಯಕ್ಕೆ ಮಾತ್ರ ಪ್ರಶಸ್ತಿಗಳನ್ನು ನೀಡುತ್ತದೆ; ಇಡೀ ಚಿತ್ರವನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ.

ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ ಮತ್ತು ಎಂ. ಬಾಲರಾಜ್ ಅವರು ನಿರ್ಮಿಸಿದ 'ಮೂಕ ನಾಯಕ' ಕನ್ನಡ ಚಿತ್ರವು ಈ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಧಿಕೃತ ಪ್ರವೇಶ ಪಡೆದು ಸ್ಪರ್ಧೆಯ ಅಂತಿಮ ಸುತ್ತು ತಲುಪಿತ್ತು.

ಚಿತ್ರದ ನಾಯಕ ನಟರಾದ ಕುಮಾರ್ ಗೋವಿಂದ್ ಅವರ ಅಭಿನಯಕ್ಕೆ ಈಗ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಸಂದಿದೆ. ದೇಶ-ವಿದೇಶದ ನಟರ ನಡುವೆ ಕನ್ನಡದ ನಟರೊಬ್ಬರು ಪ್ರಶಸ್ತಿಗೆ ಭಾಜನರಾದದ್ದು ಸಂತೋಷ ತಂದಿದೆ.

'ಮೂಕನಾಯಕ' ಚಿತ್ರವು ಮಾತು ಬಾರದ ಚಿತ್ರಕಲಾವಿದನ ಬದುಕಿನ ಸುತ್ತ ಸಂಯೋಜಿಸಿದ ಕತೆಯನ್ನು ಒಳಗೊಂಡಿದೆ. ಸಮಾಜದ ಆಗು ಹೋಗುಗಳನ್ನು ತನ್ನ ಚಿತ್ರ ರಚನೆಯ ಮುಖಾಂತರ ಅಭಿವ್ಯಕ್ತಿಸುವ ಕಾಳಜಿಯ ಕಲಾವಿದನ ಪಾತ್ರವನ್ನು ಕುಮಾರ್ ಗೋವಿಂದ್ ನಿರ್ವಹಿಸಿದ್ದಾರೆ, ಕಲಾವಿದನ ಸೋದರಿ ಪಾತ್ರವನ್ನು ನಿರ್ವಹಿಸಿದ (ಸ್ವರ್ಶ) ರೇಖಾ ಅವರು ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬರಗೂರು ಚಿತ್ರಕತೆ, ಸಂಭಾಷಣೆ, ಗೀತರಚನೆಯ ಜೊತೆಗೆ ನಿರ್ದೇಶನ ಮಾಡಿದ 'ಮೂಕ ನಾಯಕ' ಚಿತ್ರವನ್ನು 'ಸಮುದಾಯದತ್ತ ಸಿನಿಮಾ' ಪರಿಕಲ್ಪನೆಯ 'ಚಿತ್ರಯಾತ್ರೆ' ಮೂಲಕ ರಾಜ್ಯದ ಅನೇಕ ಕಡೆ ಪ್ರದರ್ಶಿಸಲಾಗಿದ್ದನ್ನು ಇಲ್ಲಿ ನೆನೆಯಬಹುದು.

SCROLL FOR NEXT