ಸಿನಿಮಾ ಸುದ್ದಿ

'ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್ ಗೂ ಸಿಕ್ಕಿದಂತೆ, ಅಷ್ಟೇ ಸಂತೋಷವಾಗಿದೆ': ಸುಮಲತಾ ಅಂಬರೀಷ್

Sumana Upadhyaya

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ, ರೆಬೆಲ್ ಸ್ಟಾರ್, ರಾಜಕಾರಣಿ ಅಂಬರೀಷ್ ಗತಿಸಿ ಇಂದು ನವೆಂಬರ್ 24ಕ್ಕೆ ಮೂರು ವರ್ಷ. ರಾಜ್ಯಾದ್ಯಂತ ಅವರನ್ನು ಅಭಿಮಾನಿಗಳು, ರಾಜಕಾರಣಿಗಳು,ಚಿತ್ರರಂಗದವರು ಸ್ಮರಿಸುತ್ತಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಸಮಾಧಿ ಬಳಿ ಇಂದು ಅವರ ಪತ್ನಿ ಸಂಸದೆ ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್ ಅಂಬರೀಷ್ ಸೇರಿದಂತೆ ಬಂಧುಗಳು, ಆಪ್ತರು ಪುಣ್ಯಸ್ಮರಣೆ ಪೂಜೆ ಹಮ್ಮಿಕೊಂಡಿದ್ದರು. ಸರ್ಕಾರದಿಂದ ಸಚಿವರಾದ ಕೆ ಗೋಪಾಲಯ್ಯ, ಎಸ್ ಟಿ ಸೋಮಶೇಖರ್ ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಸುಮಲತಾ, ಪುನೀತ್​ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಸಿಕ್ಕಿದೆ ಎಂದರೆ ಅದು ಅಂಬರೀಶ್​ಗೆ ಸಿಕ್ಕಿದ ಹಾಗೆ. ಅಂಬರೀಶ್​​ಗೆ ಪ್ರಶಸ್ತಿ ಸಿಕ್ಕೆ ಸಿಗುತ್ತದೆ. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅದು ಅಂಬರೀಶ್​ಗೆ ಸಿಕ್ಕ ಹಾಗೆ ಎಂದರು.

ಅಂಬರೀಷ್ ಅಭಿಮಾನಿಗಳು ಕೇಳುವುದು ನನಗೆ ಅರ್ಥವಾಗುತ್ತದೆ, ಆದರೆ ಅದಕ್ಕೊಂದು ಸಮಯ ಬೇಕು, ಅಂಬರೀಷ್ ಅವರು ಸ್ವಾಭಿಮಾನಿಗಳು, ನನಗೆ ಇಂತದ್ದು ಬೇಕು ಎಂದೂ ಯಾವ ವಿಷಯದಲ್ಲಿಯೂ ಕೈಚಾಚಿದವರಲ್ಲ, ಅವರ ಅಭಿಮಾನಿಗಳೂ ಅದೇ ರೀತಿ ನಡೆದುಕೊಳ್ಳಬೇಕೆಂಬುದು ನನ್ನ ಆಸೆ ಎಂದರು.

ಅಂಬರೀಷ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿಯವರು ಬಹಳ ಆಪ್ತರಾಗಿದ್ದರು, ಹಲವು ಸಮಯಗಳನ್ನು ಒಟ್ಟಿಗೆ ಕಳೆದಿದ್ದಾರೆ. ಅವರಿಗೇನು ಗೌರವ, ಸ್ಥಾನಮಾನ, ಮರ್ಯಾದೆ ಸಿಗಬೇಕೆಂದು ಸಿಎಂ ಅವರಿಗೆ ಗೊತ್ತಿದೆ, ಅದನ್ನು ನೀಡುತ್ತಾರೆ ಎಂಬ ಆಶಯ, ಭರವಸೆ ಇದೆ, ಅಂಬರೀಷ್ ಅವರಿಗೆ ಜನರ ಪ್ರೀತಿ ಸಿಕ್ಕಿದೆ, ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೇನಿದೆ ಎಂದರು.

ಇವತ್ತು ಅವರ ಮೂರನೇ ಪುಣ್ಯಸ್ಮರಣೆ. ಅವರಿಲ್ಲ ಎಂಬ ನೋವು ಶಾಶ್ವತ. ಅವ್ರ ಜೀವನದಲ್ಲಿ ನಡೆದುಕೊಂಡು ಬಂದಿರೋ ಹಾದಿಯೇ ನಮಗೆ ಶಕ್ತಿ. ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕು. ಅವ್ರ ಜೊತೆ ಕಳೆದ ಸಮಯ ನೆನಪಿಸಿಕೊಂಡರೆ ಧೈರ್ಯ ಬರುತ್ತದೆ ಎಂದರು. 

ಡಾ.ಅಂಬರೀಷ್ ಚಾರಿಟೆಬಲ್ ಟ್ರಸ್ಟ್: ಅಂಬರೀಶ್ ಅವರ ಸಮಾಜಮುಖಿ ಕಾರ್ಯಗಳನ್ನು ಡಾ.ಅಂಬರೀಷ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮುಂದುವರಿಸಿಕೊಂಡು ಹೋಗುತ್ತೇವೆ, ಟ್ರಸ್ಟ್ ಆರಂಭಿಸುವ ಕಾರ್ಯವನ್ನು ಆರಂಭಿಸಿದ್ದೇವೆ ಎಂದರು.

ನಂತರ ಸುಮಲತಾ ಅವರು ಡಾ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ಸಮಾಧಿಗೆ ಸಹ ಗೌರವ ನಮನ ಸಲ್ಲಿಸಿದರು. 

SCROLL FOR NEXT