ಸಿನಿಮಾ ಸುದ್ದಿ

'ಲಕ್ಕಿ ಮ್ಯಾನ್' ಮೂಲಕ ಅಭಿಮಾನಿಗಳಿಗೆ ಪುನೀತ್- ಪ್ರಭುದೇವ ನೃತ್ಯ ವೈಭವ ನೋಡುವ ಸೌಭಾಗ್ಯ!

Sumana Upadhyaya

ನಟ-ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ಅವರ ಚೊಚ್ಚಲ ನಿರ್ದೇಶನದ ಕನ್ನಡ ಸಿನೆಮಾ ಹಲವು ವಿಶೇಷತೆಗಳನ್ನು ಹೊಂದಿದೆ.

ತಮಿಳಿನ 'ಒ ಮೈ ಕಡುವಲೆ' ಸಿನೆಮಾದಿಂದ ಪ್ರೇರಣೆ ಪಡೆದು ಕನ್ನಡದಲ್ಲಿ 'ಲಕ್ಕಿ ಮ್ಯಾನ್' ಚಿತ್ರ ತಯಾರಿಸುತ್ತಿದ್ದು ಪುನೀತ್ ರಾಜ್ ಕುಮಾರ್ ಅವರೊಂದಿಗೆ ಕೃಷ್ಣ ಅವರು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಾಮರಾಜ್ ನಿರ್ಮಾಣದ ಚಿತ್ರತಂಡದಿಂದ ಬಂದಿರುವ ಮತ್ತೊಂದು ಲೇಟೆಸ್ಟ್ ಸುದ್ದಿ ಬಹುಮುಖ ಪ್ರತಿಭೆ, ಭಾರತೀಯ ಚಿತ್ರರಂಗದ ಪ್ರಭುದೇವ ಕೂಡ ಸೇರುತ್ತಿರುವುದು.

ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಪ್ರಭುದೇವ ಮತ್ತು ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ವೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ. ಅವರ ಕಿರಿಯ ಸೋದರ ನಾಗೇಂದ್ರ ಪ್ರಸಾದ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದರಿಂದ ಅಣ್ಣ ಬಂದು ಸಾಥ್ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಬೆಂಗಳೂರಿನಲ್ಲಿರುವ ನಟ, ನಿರ್ದೇಶಕ, ಕೊರಿಯೊಗ್ರಾಫರ್ ಪ್ರಭುದೇವ ಅವರ ಜೊತೆ ನಿರಂಜನ್ ಸುದೀಂಧ್ರ ಮತ್ತು ನಿರ್ದೇಶಕ ರಾಮ್ ವೆಂಕಟೇಶ್ ಬಾಬು ಕೂಡ ಇದ್ದಾರೆ.

ಚಿತ್ರದ ಹಾಡಿನ ಚಿತ್ರೀಕರಣ ನಗರದಲ್ಲಿ ಸಾಗುತ್ತಿದೆ. ಜಾನಿ ಮಾಸ್ಟರ್ ಹಾಡಿಗೆ ಸ್ಟೆಪ್ಸ್ ಹೇಳಿಕೊಡುತ್ತಿದ್ದಾರೆ.ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವುದು ಚಿತ್ರದ ಹೈಲೈಟ್.

ಕೃಷ್ಣ ಅವರ ಜೊತೆಗೆ ಲಕ್ಕಿ ಮ್ಯಾನ್ ನಲ್ಲಿ ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ನಾಯಕಿಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು ಡ್ಯಾನ್ಸ್ ಚಿತ್ರೀಕರಣದೊಂದಿಗೆ ಮುಕ್ತಾಯವಾಗಲಿದೆ.

ರಾಮ್ ವೆಂಕಟೇಶ್ ಬಾಬು, ನಿರಂಜನ್ ಸುದೀಂಧ್ರ ಜೊತೆ ಪ್ರಭುದೇವ

ಪ್ರಭುದೇವ ಅವರ ಕಿರಿಯ ಸೋದರನಾಗಿರುವ ನಿರ್ದೇಶಕ ನಾಗೇಂದ್ರ ಪ್ರಸಾದ್ ಕನ್ನಡದಲ್ಲಿ ಹಿಂದೆ ಚಿತ್ರ ಮತ್ತು ಮನಸೆಲ್ಲಾ ನೀನೆ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಪ್ರಭುದೇವ ಅವರ ನಿರ್ದೇಶನದ ಚಿತ್ರಗಳಲ್ಲಿ ತೆರೆಯ ಹಿಂದೆ ನಿಂತು ಸಾಕಷ್ಟು ಕೆಲಸ ಮಾಡಿದ್ದರು. ಅವುಗಳಲ್ಲಿ ತಮಿಳಿನಲ್ಲಿ ವೇದಿ ಮತ್ತು ಹಿಂದಿಯಲ್ಲಿ ರೌಡಿ ರಾಥೋಡ್ ಮುಖ್ಯವಾದವು. ಸ್ವತಂತ್ರ ನಿರ್ದೇಶಕರಾಗಿ ಲಕ್ಕಿ ಮ್ಯಾನ್ ಮೊದಲ ಚಿತ್ರ.

ಮೂಲತಃ ಮೈಸೂರಿನವರಾದ ಪ್ರಭುದೇವ ಕನ್ನಡದಲ್ಲಿ ಮೊದಲು ನಟಿಸಿದ್ದು ಉಪೇಂದ್ರ ಅವರ ಹೆಚ್2ಒ ಚಿತ್ರದಲ್ಲಿ. ತಮ್ಮನ ಮನಸೆಲ್ಲಾ ನೀನೆ ಚಿತ್ರದಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಮತ್ತು 2007ರಲ್ಲಿ ಪ್ರಾರಂಭ ಚಿತ್ರದಲ್ಲಿ ಕೂಡ ನಟಿಸಿದ್ದರು. ಇದೀಗ 13 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

SCROLL FOR NEXT