ಸಿನಿಮಾ ಸುದ್ದಿ

ಮಕ್ಕಳ ಮುಂದೆ ಅಸಭ್ಯ ವರ್ತನೆ: ಪೋಕ್ಸೋ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಗೆ ಜಾಮೀನು

Vishwanath S

ಕೊಚ್ಚಿ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮಲಯಾಳಂನ ಖ್ಯಾತ ನಟ ಶ್ರೀಜಿತ್ ರವಿಗೆ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕಳೆದ ಆರು ವರ್ಷಗಳಿಂದ ವರ್ತನೆಯ ಅಸ್ವಸ್ಥತೆಗಾಗಿ ರವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಕೀಲರ ವಾದವನ್ನು ಪರಿಗಣಿಸಿ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್, ರವಿಗೆ ಸೂಕ್ತ ಚಿಕಿತ್ಸೆ ನೀಡುವ ಇಚ್ಛೆಯನ್ನು ದೃಢೀಕರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸುವಂತೆ ಆತನ ಪತ್ನಿ ಮತ್ತು ತಂದೆಗೆ ಸೂಚಿಸಿದೆ. ಇದೇ ರೀತಿ ಕಾನೂನು ಬಾಹಿರ ಕೃತ್ಯ ಮರುಕಳಿಸಿದರೆ ಜಾಮೀನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಜುಲೈ 4ರಂದು ಅಯ್ಯಂತೊಳೆ ಎಸ್‌ಎನ್‌ ಪಾರ್ಕ್‌ನಲ್ಲಿ ಈ ಘಟನೆ ನಡೆದಿತ್ತು. ಇಬ್ಬರು ಅಪ್ರಾಪ್ತ ಬಾಲಕಿಯರು ನಿಂತಿದ್ದ ವೇಳೆ ತನ್ನ ಕಾರಿನಲ್ಲಿ ಕುಳಿತಿದ್ದ ಶ್ರೀಜಿತ್ ಕಾರಿನಿಂದ ಕೆಳಗಿಳಿದು ಗುಪ್ತಾಂಗವನ್ನು ಪ್ರದರ್ಶಿಸಿದ್ದರು ಎಂದು ಬಾಲಕಿಯರ ಪೋಷಕರು ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ಶ್ರೀಜಿತ್‌ ರವಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಅವರನ್ನು ತ್ರಿಶೂರ್ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದರು.

46 ವರ್ಷದ ನಟನ ವಿರುದ್ಧ ಸೆಕ್ಷನ್ 11(1) ಮತ್ತು 12 ಸೇರಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಹಿರಿಯ ನಟ ಟಿ.ಜಿ. ರವಿ ಅವರ ಪುತ್ರರಾಗಿರುವ ಶ್ರೀಜಿತ್ ರವಿರನ್ನು 2016ರಲ್ಲೂ ಪಾಲಕ್ಕಾಡ್ ಪೊಲೀಸರು ಇಂತಹದೇ ಪ್ರಕರಣದಲ್ಲಿ ರವಿಯನ್ನು ಬಂಧಿಸಿದ್ದರು.

SCROLL FOR NEXT