ಸಿನಿಮಾ ಸುದ್ದಿ

'ಅಪ್ಪು ಗಂಧದ ಗುಡಿಯಲ್ಲಿ ಅಭಿನಯಸಿಲ್ಲ, ಜೀವಿಸಿ ಹೋಗಿದ್ದಾರೆ, ನಮ್ಮ ನೆನಪಿನಂಗಳದಲ್ಲಿ ಜೀವಂತವಾಗಿರಿಸೋಣ': ಅಮಿತಾಬ್ ಬಚ್ಚನ್

Sumana Upadhyaya

ಮುಂಬೈ/ಬೆಂಗಳೂರು: ಕನ್ನಡ ನಾಡು-ನುಡಿ, ಪ್ರಾಕೃತಿಕ ಸೌಂದರ್ಯ, ಪ್ರಾಣಿ ಪಕ್ಷಿಗಳ ಬಗ್ಗೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದ 'ಗಂಧದ ಗುಡಿ' ಸಾಕ್ಷ್ಯಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಕನ್ನಡ ನಾಡು- ಗಂಧದ ಬೀಡಿನ ಶ್ರೀಮಂತಿಕೆಯನ್ನು ಅದರಲ್ಲಿ ವರ್ಣಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar)  ಹಠಾತ್ ನಿಧನರಾಗಿ ಒಂದು ವರ್ಷ ಗತಿಸಿದರೂ ಇಂದಿಗೂ ಎಲ್ಲರ ಹೃದಯದಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ. ಗಂಧದ ಗುಡಿ ಬಗ್ಗೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್(Amitabh Bachchan)  ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ, ಅಪ್ಪುವನ್ನು ಸ್ಮರಿಸಿದ್ದಾರೆ. ಅಪ್ಪು ನಗುವಿನ ಬಗ್ಗೆ ಕೊಂಡಾಡಿದ್ದಾರೆ. ಗಂಧದ ಗುಡಿ ಸಿನಿಮಾ ನೋಡುವ ಮೂಲಕ ಅವರನ್ನು ನಮ್ಮ ಮನದಲ್ಲಿ ಶಾಶ್ವತ ಉಳಿಸಿಕೊಳ್ಳೋಣ ಎಂದು ಮನದುಂಬಿ ಮಾತನಾಡಿದ್ದಾರೆ. 

ಅಮಿತಾಬ್ ಬಚ್ಚನ್ ಹೇಳಿದ್ದೇನು?: ನಾನು ಪುನೀತ್ ರಾಜಕುಮಾರ್ ಬಗ್ಗೆ ಮಾತನಾಡಲು ಇಲ್ಲಿ ಕುಳಿತಿದ್ದೇನೆ. ಅಪ್ಪು ಬಾಲಕನಾಗಿದ್ದಾಗಲೇ ನಾನು ನೋಡಿದ್ದೇನೆ. ಅಪ್ಪು ಸ್ಮೈಲ್ ತುಂಬಾ ವಿಶೇಷವಾಗಿಯೇ ಇತ್ತು. ಎಲ್ಲೆ ಇದ್ದರೂ ಹೇಗೆ ಇದ್ದರೂ ಅಪ್ಪು ನಗ್ತಾ ಇದ್ದರು. ಆ ನಗುವಿನಿಂದಲೇ ಅಪ್ಪು ಎಲ್ಲರ ಹೃದಯ ಗೆಲ್ಲುತ್ತಿದ್ದರು.

ನಾನು ಈಗ ಅಪ್ಪು ಕೊನೆ ಸಿನಿಮಾ ಬಗ್ಗೆ ಮಾತನಾಡುತ್ತೇನೆ. ಅಪ್ಪು ಗಂಧದ ಗುಡಿಯಲ್ಲಿ ಅಭಿನಯಸಿಲ್ಲ. ಅವರು ಜೀವಿಸಿ ಹೋಗಿದ್ದಾರೆ. ಕರ್ನಾಟಕದ ಅರಣ್ಯ ಸಂಪತ್ತಿನ ಮಹತ್ವ ಸಾರುತ್ತಲೇ ನಿಮ್ಮನ್ನ ಬೇರೆ ಜಗತ್ತಿಗೆ ಕರೆದುಕೊಂಡು ಹೋಗುತ್ತಾರೆ.

ಅಪ್ಪು ಕೊನೆಯ ಸಿನಿಮಾ ಗಂಧದ ಗುಡಿ ವಿಶೇಷವಾಗಿದೆ. ಈ ಸಿನಿಮಾದಲ್ಲಿ ಅರಣ್ಯ ಸಂಪತ್ತಿನ ಚಿತ್ರಣವೂ ಇದೆ. ಮುಂದಿನ ಪೀಳಿಗೆಗೆ ಇದನ್ನ ಉಳಿಸೋ ಸಣ್ಣ ಜಾಗೃತಿನೂ ಇದೆ. ನಮ್ಮ ಮಕ್ಕಳಿಗಾಗಿಯೇ ಅರಣ್ಯ ಸಂಪತ್ತು ಉಳಿಸಬೇಕು ಅನ್ನೋ ಕಾಳಜಿ ಕೂಡ ಇದೆ ಎಂದಿದ್ದಾರೆ. 

ಗಂಧದ ಗುಡಿ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಅವುಗಳನ್ನು ತೆರೆ ಮೇಲೆ ನೋಡಿ ಅನುಭವಿಸಬೇಕು. ಈಗಾಗಲೇ ಅನೇಕರು ಗಂಧದ ಗುಡಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಪ್ಪು ಜೀವಂತಿಕೆಯನ್ನ ಕಂಡು ಖುಷಿ ಪಟ್ಟಿದ್ದಾರೆ. ಬನ್ನಿ, ಅಪ್ಪುವನ್ನ ನಮ್ಮ ನೆನಪಿನಂಗಳದಲ್ಲಿ ಸದಾ ಜೀವಂತವಾಗಿರಿಸೋಣ ಅಂತಲೂ ಅಮಿತಾಭ್ ಬಚ್ಚನ್ ಹೇಳಿದ್ದಾರೆ.

SCROLL FOR NEXT