ಸಿನಿಮಾ ಸುದ್ದಿ

ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ: ಮರು ವಿನ್ಯಾಸಗೊಂಡ 'ಸಾಹಸ ಸಿಂಹ'ನ ಗೃಹ ಪ್ರವೇಶದಲ್ಲಿ ಸಿಎಂ ಬೊಮ್ಮಾಯಿ ಸೇರಿ ಹಲವರು ಭಾಗಿ

Sumana Upadhyaya

ಕನ್ನಡದ ಹೆಸರಾಂತ ನಟ, ಅಭಿಮಾನಿಗಳ ಪಾಲಿನ ಸಾಹಸ ಸಿಂಹ ಬಾಳಿ ಬದುಕಿದ ಮನೆ ಮರುವಿನ್ಯಾಸಗೊಂಡು ಇಂದು ನವೆಂಬರ್ 27ರಂದು ಗೃಹ ಪ್ರವೇಶ ಸಮಾರಂಭ ಕಂಡಿದೆ.ಅವರ ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು-ಅಳಿಯ ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಗೃಹ ಪ್ರವೇಶ ಕಾರ್ಯಕ್ರಮ ನಡೆಸಿದ್ದಾರೆ.

ಗೃಹ ಪ್ರವೇಶ ಪೂಜೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು, ಚಿತ್ರರಂಗದ ಕಲಾವಿದರು ಆಗಮಿಸಿದ್ದಾರೆ. ಸಾಹಸಸಿಂಹನ ಮನೆಯನ್ನು ನೋಡಿ ಖುಷಿಪಟ್ಟ ಸಿಎಂ ಬೊಮ್ಮಾಯಿ, ಸಾಹಸಸಿಂಹ ನಮ್ಮ ಅಚ್ಚುಮೆಚ್ಚಿನ ನಟ. ವಿಷ್ಣುವರ್ಧನ್ ಮನೆ ತುಂಬಾ ಸುಂದರವಾಗಿದೆ.

ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಕೆಲಸಗಳು ನಡೆಯುತ್ತಿದ್ದು. ಸದ್ಯದಲ್ಲೇ ವಿಷ್ಣು ಸ್ಮಾರಕದ ಉದ್ಘಾಟನೆಯನ್ನು ಡಿಸೆಂಬರ್ ತಿಂಗಳ ಒಳಗೆ ಮಾಡುತ್ತೇವೆ. ವಿಷ್ಣು ನಮ್ಮೆಲ್ಲರಿಗೂ ಮಾದರಿ ವ್ಯಕ್ತಿತ್ವ. ವಿಷ್ಣು ಘನತೆಯನ್ನು ಎತ್ತಿಹಿಡಿಯುವ ವಸ್ತುಸಂಗ್ರಹಾಲಯ ಮಾಡುತ್ತೇವೆ ಎಂದರು.

ಮೈಸೂರು ಹೊರವಲಯದ ಎಚ್ ಡಿ ಕೋಟೆ ರಸ್ತೆಯ ಉದ್ಬೂರು ಬಳಿ ಹಾಲಾಳು ಗ್ರಾಮದಲ್ಲಿ ಸರ್ಕಾರದ 5 ಎಕರೆ ಪ್ರದೇಶದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದರ ಶಂಕುಸ್ಥಾಪನೆ ನೆರವೇರಿತು. ವಿಷ್ಣುವರ್ಧನ್ ಪ್ರತಿಮೆ, ಅವರ ಛಾಯಾಚಿತ್ರಗಳುಳ್ಳ ಗ್ಯಾಲರಿ, ರಂಗತರಬೇತಿ ಶಿಬಿರಗಳ ಆಯೋಜನೆಗೆ ಸ್ಥಳಾವಕಾಶ ಈ ಸ್ಮಾರಕದಲ್ಲಿರುತ್ತದೆ.

ಇಂದು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ನಟ ಜಗ್ಗೇಶ್, ವಿಷ್ಣುಮನೆಗೆ ಒಂದು ಬ್ಯುಟಿಫುಲ್ ಕಥೆಯಿದೆ. ವಿಷ್ಣು ಅವರಿಗೆ ಮೊದಲು ಯಾರೋ ಭಯ ಹುಟ್ಟಿಸಿದ್ರು. ಜಯನಗರದ ಮನೆ ವಿಷ್ಣು ಸರ್ ಗೆ ಪ್ರಿಯವಾದ ಜಾಗ. ಮನೆಯಲ್ಲಿ ಒಂದೊಂದು ಜಾಗವು ಕಾಡುತ್ತೆ. ಭಾವನೆಗಳನ್ನ ಕೆದಕುತ್ತೆ. ಇದು ಮನೆಯಲ್ಲ, ನಮ್ಮ ಪಾಲಿಗೆ ದೇವಸ್ಥಾನ. ಅನಿರುದ್ದ್ ವಿಷ್ಣುವರ್ಧನ್ ಮಗನ ಸಮಾನ. ಅನಿರುದ್ದ್ ಪರವಾಗಿ ಈಗಲೂ ನಿಲ್ಲಬೇಕು ಎಂದರು.

SCROLL FOR NEXT