ಸಿನಿಮಾ ಸುದ್ದಿ

‘ಹೈಪರ್ ಆಕ್ಟಿವ್’ ಮಕ್ಕಳ 'ರೂಬಿಕ್ಸ್' ಶೀಘ್ರದಲ್ಲೇ ತೆರೆಗೆ

Lingaraj Badiger

ಬೆಂಗಳೂರು: ಮಕ್ಕಳ ಮನಸ್ಸು ಬಹಳ ಮುಗ್ದ. ಒಂದು ಚೂರು ನೋವಾದರೂ ತಡೆದುಕೊಳ್ಳಲಾಗದಷ್ಟು ಸೂಕ್ಮ್ಮ. ಇತ್ತೀಚಿನ ಮಕ್ಕಳಂತೂ ಬಹಳ ಚುರುಕು, ‘ಹೈಪರ್ ಆಕ್ಟಿವ್’ ಎಂಬಷ್ಟು. ಇಂತಹ ಮಕ್ಕಳಲ್ಲಿ ಹುಟ್ಟುವುದು ತರಹೇವಾರಿ, ವೈವಿಧ್ಯಮಯ ಪ್ರಶ್ನೆಗಳು. ಇಂತಹ ಮಕ್ಕಳ ಪ್ರಶ್ನೆಗಳಿಗೆ ಪೋಷಕರು ಉತ್ತರಿಸುವಷ್ಟರಲ್ಲಿ ಹೈರಾಣರಾಗಿರುತ್ತಾರೆ. ಅಷ್ಟೊಂದು ವಿಭಿನ್ನ ಮತ್ತು ಕ್ಲಿಷ್ಟ. ಹಾಗೆ ವೈವಿಧ್ಯಮಯ ಪ್ರಶ್ನೆಗಳು ಒಟ್ಟಿಗೆ ಮಕ್ಕಳ ಮನಸ್ಸಿನಲ್ಲಿ ಬಂದರೆ ಏನಾಗುತ್ತದೆ ಎಂಬ ವಿಷಯ ಹೊಂದಿರುವ ‘ರೂಬಿಕ್ಸ್’ ಎಂಬ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ.

‘ಮದರಂಗಿ’, ‘ವಾಸ್ಕೋಡಿಗಾಮ’ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿದ್ದ ಮತ್ತು ‘ಆಪಲ್ ಕೇಕ್’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ರಂಜಿತ್ ಕುಮಾರ್ ಗೌಡ ‘ರೂಬಿಕ್ಸ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ರೂಬಿಕ್ಸ್’ ಎಂಬುದನ್ನು ಸಾಂಕೇತಿಕವಾಗಿ ಈ ಸಿನಿಮಾಗೆ ಇಟ್ಟಿದ್ದೇವೆ. ಮಗುವಿನ ತಲೆಯಲ್ಲಿ ಅಷ್ಟೂ ಪ್ರಶ್ನೆಗಳು ಹುಟ್ಟಿದಾಗ ಏನಾಗುತ್ತದೆ ಎಂಬುದೇ ನಮ್ಮ ಸಿನಿಮಾದ ಒಟ್ಟಾರೆ ಸಾರಂಶ ಎನ್ನುತ್ತಾರೆ ನಿರ್ದೇಶಕ ರಂಜಿತ್ ಕುಮಾರ್.

ಎಲ್ಲರೂ ಮಕ್ಕಳು ಬುದ್ದಿವಂತರಾಗಿರಲಿ ಎಂದು ಭಾವಿಸುತ್ತೇವೆ. ಇಷ್ಟೊಂದು ಬುದ್ದಿವಂತಿಕೆಯ ಮಕ್ಕಳು ನಮ್ಮ ಸುತ್ತ ಇದ್ದಾಗ ಸಮಾಜದಲ್ಲಿ ಪೋಷಕರು ಎಂತಹ ಪ್ರಶ್ನೆಗಳನ್ನು ಅವರಿಂದ ನಿರೀಕ್ಷಿಸಬಹುದು ಎಂಬ ಅಂಶವನ್ನು ಸಹ ಹೇಳಲಾಗಿದೆ ಎಂದು ರಂಜಿತ್ ಕುಮಾರ್ ಗೌಡ ತಿಳಿಸಿದ್ದಾರೆ.

ಚುರುಕು, ಹೈಪರ್ ಆಕ್ಟಿವ್ ಹುಡುಗನಾಗಿ ಈ ಸಿನಿಮಾದಲ್ಲಿ ಮಾಸ್ಟರ್ ಸಾತ್ವಿಕ್ ಎಂಬ ಬಾಲಕ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ಟರ್ ಹರಿಕೃಷ್ಣ, ಶಂಕರ್ ಜಗನ್ನಾಥ್, ರಾಜು ಬೈ , ಮಾಣಿಕ್ಯ ಜಿ.ಎನ್, ವಿಕ್ರಾಂತ್ ಅರಸ್, ಅನಿಕಾ ರಮ್ಯ ಮತ್ತಿತರರು ಇದರಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರನ್ನು ಜನಸ್ನೇಹಿ ನಿರಾಶ್ರಿತರ ಆಶ್ರಮದ ದೇವರ ಮಕ್ಕಳಿಂದ ಬಿಡುಗಡೆ ಮಾಡಿಸಲಾಯಿತ್ತು. ಈಗಾಗಲೇ ಶೇ. 70 ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರ ‘ಎಸ್.ಪಿ ಪಿಕ್ಚರ್ಸ್‌ನ ಬ್ಯಾನರ್ ನಲ್ಲಿ ಮೂಡಿ ಬಂದಿದೆ. ಶೈಲಜಾ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ರಂಜಿತ್ ಕುಮಾರ್ ಗೌಡ ಈ ಸಿನಿಮಾದ ಚಿತ್ರೀಕರಣದ ಜೊತೆಗೆ ಲೂಸ್ ಮಾದ ಯೋಗಿ ಅವರ ‘ಕಂಸ’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅದರ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.

SCROLL FOR NEXT