ಸಿನಿಮಾ ಸುದ್ದಿ

ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ 'ಅಪ್ಪು' ಗತಿಸಿ ಒಂದು ವರ್ಷ: ಮೊದಲ ಪುಣ್ಯತಿಥಿ, ಸಮಾಧಿ ಬಳಿ ಕಾರ್ಯಕ್ರಮ

Sumana Upadhyaya

ಬೆಂಗಳೂರು/ಮೈಸೂರು: ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ 'ಅಪ್ಪು'ಅನಿರೀಕ್ಷಿತವಾಗಿ ಗತಿಸಿ ಇಂದು ಅಕ್ಟೋಬರ್ 29ಕ್ಕೆ ಒಂದು ವರ್ಷ. ಪ್ರಥಮ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಪುನೀತ್ ಸಮಾಧಿ (Power star Puneet Rajkumar) ಸ್ಥಳ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಕುಟುಂಬಸ್ಥರು ಪೂಜೆ, ಶಾಸ್ತ್ರ ನೆರವೇರಿಸಲಿದ್ದಾರೆ.

ಸಮಾಧಿಗೆ ಪೂಜೆ: ಅಪ್ಪುಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಇಟ್ಟು ಕುಟುಂಬಸ್ಥರು ಸಮಾಧಿ ಮುಂದೆ ಪೂಜೆ ಮಾಡಲಿದ್ದಾರೆ. ಕಂಠೀರವ ಸ್ಟುಡಿಯೊ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸುವ ಸಾಧ್ಯತೆಯಿದ್ದು ಪುಣ್ಯತಿಥಿ ಹಿನ್ನೆಲೆಯಲ್ಲಿ ಆಗಮಿಸುವವರಿಗೆ ಉಪಹಾರ, ಊಟ, ನೀರಿನ ವ್ಯವಸ್ಥೆ ಏರ್ಪಡಿಸಲಾಗಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಕುಟುಂಬದವರು ಸಮಾಧಿಗೆ ಬರಲಿದ್ದಾರೆ. ಸಮಾಧಿ ಬಳಿ ಪುನೀತ್​​ಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ಮಾಡಲಿದ್ದಾರೆ. ಇಡೀ ದೊಡ್ಮನೆ ಕುಟುಂಬ ಈ ಪೂಜೆಗೆ ಬರಲಿದೆ. ಜೊತೆಗೆ ಕನ್ನಡ ಚಿತ್ರರಂಗದವರು, ಅಪ್ಪು ಆಪ್ತರು, ಸ್ನೇಹಿತರು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಅನ್ನದಾನ
ಅಪ್ಪು ಸಮಾಧಿಗೆ ಪೂಜೆ ಮಾಡಿದ ನಂತರದಲ್ಲಿ ಕುಟುಂಬ ಮನೆಗೆ ಮರಳಲಿದೆ. ಅಲ್ಲಿಯೂ ಪೂಜೆ ಇರಲಿದೆ. ವರ್ಷದ ಕಳಸ ಪೂಜೆಯನ್ನು ಕುಟುಂಬ ಮಾಡಲಿದೆ. ಬಳಿಕ ಬಂಧು ಬಳಗಕ್ಕೆ ಭೋಜನ ವ್ಯವಸ್ಥೆ ಇರಲಿದೆ. ಪುನೀತ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳಿಗೆ ಅನ್ನದಾನವಿರಲಿದೆ. ಎಷ್ಟೇ ಸಂಖ್ಯೆಯಲ್ಲಿ ಅಭಿಮಾನಿಗಳುಪ ಬಂದರೂ ಊಟದ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.

ದಿನವಿಡೀ ಗೀತ ನಮನ: ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೊ ಬಳಿ ಇಂದು ದಿನವಿಡೀ ಗೀತ ನಮನ ಕಾರ್ಯಕ್ರಮವಿದ್ದು, ಕನ್ನಡ ಚಿತ್ರರಂಗದ ಕಲಾವಿದರು, ಅಪ್ಪು ಅಭಿಮಾನಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಸಾಧುಕೋಕಿಲ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದಾರೆ. 

ಇತ್ತ ಪುನೀತ್ ನಿವಾಸವಿರುವ ಬೆಂಗಳೂರಿನ ಸದಾಶಿವನಗರದಲ್ಲಿ ಪೆಂಡಾಲ್ ಹಾಕಲಾಗಿದ್ದು ಅಲ್ಲಿ ಕೂಡ ಆಗಮಿಸುವವರಿಗೆ ಊಟ-ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಡಾ ರಾಜ್ ಕುಮಾರ್ ಕುಟುಂಬದ ಕೂಸು ಮೈಸೂರಿನ ಶಕ್ತಿದಾಮದ ಮಕ್ಕಳು ಅಪ್ಪು ಪುಣ್ಯಸ್ಮರಣೆ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಿದ್ದಾರೆ. ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಪುನೀತ್ ಗತಿಸಿ ಒಂದು ವರ್ಷವಾದರೂ ಕರುನಾಡಿನ ಜನತೆಗೆ ದುಃಖ, ಕಣ್ಣೀರು ಮಾತ್ರ ಕಡಿಮೆಯಾಗಿಲ್ಲ. ಕಳೆದ ಒಂದು ವರ್ಷದಿಂದ ಕಣ್ಣೀರಿನಲ್ಲಿಯೇ ಸಾಗುತ್ತಿದ್ದಾರೆ. ನಟನೆಗಿಂತ ಹೆಚ್ಚಾಗಿ ಸಾಮಾಜಿಕ ಕೆಲಸ ಕಾರ್ಯಗಳಿಂದ ಪುನೀತ್ ಜನತೆಗೆ ಹತ್ತಿರವಾದರು. ಅವರ ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ವಿವಿಧ ಕಡೆ ಅನ್ನದಾನ, ರಕ್ತದಾನ ಏರ್ಪಡಿಸಲಾಗಿದೆ.

ಗಣ್ಯರಿಂದ ಸ್ಮರಣೆ: ಪುನೀತ್ ರಾಜ್ ಕುಮಾರ್ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ರಾಜಕೀಯ ನಾಯಕರು, ಗಣ್ಯರು, ಕಲಾವಿದರು ಅವರನ್ನು ಸ್ಮರಿಸುತ್ತಿದ್ದಾರೆ. 

SCROLL FOR NEXT