ಸಿನಿಮಾ ಸುದ್ದಿ

ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಯಾವುದೇ ವಿಷಯ ಮಾಸ್ ಚಿತ್ರವಾಗುತ್ತದೆ: ನಟ ಧನಂಜಯ್

Ramyashree GN

ಧನಂಜಯ್ ಅವರು 'ಹೊಯ್ಸಳ' ಚಿತ್ರದ ಫೈಟ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುತ್ತಿದ್ದು, 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಸಿನಿಮಾ ಬಿಡುಗಡೆಗೆ ಹೊಸ ದಿನಾಂಕವನ್ನು ಹುಡುಕಲಾಗುತ್ತಿದೆ. ಹೀಗಿರುವಾಗಲೇ ಅವರು 'ಹೆಡ್ ಬುಷ್‌' ಚಿತ್ರದ ಪ್ರಚಾರಕ್ಕೆ ಕೂಡ ಸಜ್ಜಾಗುತ್ತಿದ್ದಾರೆ. ಈ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ, ಅವರು ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಲಿರುವ 'ಮಾನ್ಸೂನ್ ರಾಗ' ಸಿನಿಮಾದಲ್ಲೂ ನಟಿಸಿದ್ದಾರೆ.

'ನಾನು ಸಿನಿಮಾದ ಸೃಜನಶೀಲ ಪ್ರಕ್ರಿಯೆಯನ್ನು ಆನಂದಿಸುತ್ತೇನೆ. ನಾನು ಪ್ರತಿ ಚಿತ್ರದಿಂದ ಒಳ್ಳೆಯ ನೆನಪುಗಳನ್ನು ಪಡೆಯಲು ಬಯಸುತ್ತೇನೆ. ಏಕೆಂದರೆ ಅವುಗಳನ್ನು ನಮ್ಮ ನಂತರದ ದಿನಗಳಲ್ಲಿ ನಾವು ನೆನಪಿಸಿಕೊಳ್ಳುತ್ತೇವೆ' ಎನ್ನುತ್ತಾರೆ ಧನಂಜಯ್.

ನಿರ್ದೇಶಕ ಎಸ್ ರವೀಂದ್ರನಾಥ್ ಅವರೊಂದಿಗಿನ ಮಾನ್ಸೂನ್ ರಾಗ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಧನಂಜಯ್, 'ನನ್ನ ಈ ಪಾತ್ರವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ನಾನು ಒರಟು ಮತ್ತು ಕಠಿಣ ವ್ಯಕ್ತಿ ಎಂದು ಬಿಂಬಿಸಲಾಗಿದ್ದರೂ, ಆತನಲ್ಲಿ ಮುಗ್ಧತೆ ಮತ್ತು ಪ್ರಾಮಾಣಿಕತೆ ಇದೆ. ಇದನ್ನು ನಿರ್ದೇಶಕರು ಚೆನ್ನಾಗಿ ಹೊರತಂದಿದ್ದಾರೆ' ಎಂದು ತಿಳಿಸಿದ್ದಾರೆ.

ಚಿತ್ರಕ್ಕಾಗಿ ದಿವಂಗತ ಗುರು ಕಶ್ಯಪ್ ಅವರು ಕೆಲವು ಅದ್ಭುತ ಸಂಭಾಷಣೆಗಳನ್ನು ಬರೆದಿದ್ದರೆ, ಅಚ್ಯುತ್ ಕುಮಾರ್, ಸುಹಾಸಿನಿ ಮತ್ತು ಯಶ ಶಿವಕುಮಾರ್ ಸೇರಿದಂತೆ ಉತ್ತಮ ತಾರಾಗಣ ಸಿನಿಮಾದಲ್ಲಿದೆ. ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 'ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಛಾಯಾಗ್ರಾಹಕ ಎಸ್‌ಕೆ ರಾವ್ ಅವರು ಮಾನ್ಸೂನ್ ರಾಗಕ್ಕೆ ಜೀವ ತುಂಬಿದ್ದಾರೆ ಎಂದು ಧನಂಜಯ್ ಹೇಳುತ್ತಾರೆ.

ಧನಂಜಯ್ ಹೆಚ್ಚಾಗಿ ಮಾಸ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ, ರತ್ನನ್ ಪ್ರಪಂಚ ಮತ್ತು ಬಡವ ರಾಸ್ಕಲ್ ಅಂತಹ ರೊಮ್ಯಾಂಟಿಕ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವು ಜನಸಾಮಾನ್ಯರನ್ನು ಆಕರ್ಷಿಸುತ್ತವೆ. 'ಭಾವನೆಗಳ ಮೇಲೆ ಗಟ್ಟಿಯಾಗಿರುವ ಮತ್ತು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಯಾವುದೇ ಉತ್ತಮ ಚಲನಚಿತ್ರವನ್ನು ಮಾಸ್ ಚಿತ್ರವೆಂದು ಪರಿಗಣಿಸಬಹುದು. ಮಾಸ್ ಎಂದರೆ ಕೇವಲ ಬಿಲ್ಡಪ್‌ಗಳು ಮತ್ತು ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್‌ಗಳ ಬಗ್ಗೆ ಅಲ್ಲ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗುವ ಯಾವುದೇ ಚಿತ್ರವಾದರೂ ಅದು ಮಾಸ್ ಚಿತ್ರವಾಗುತ್ತದೆ. ಮಾನ್ಸೂನ್ ರಾಗವು ಅಂತಹ ಒಂದು ಚಿತ್ರವಾಗಲಿದೆ' ಎಂದು ಅವರು ವಿವರಿಸುತ್ತಾರೆ.

'ತಲೆಮಾರುಗಳು ಬದಲಾಗುತ್ತವೆ. ಆದರೆ, ಭಾವನೆಗಳು ಸ್ಥಿರವಾಗಿರುತ್ತವೆ ಮತ್ತು ಪ್ರಣಯವು ಶಾಶ್ವತವಾಗಿ ಉಳಿಯುತ್ತದೆ. ಪ್ರತಿಯೊಬ್ಬರೂ ಪ್ರೀತಿ ಮತ್ತು ಬೇರಾಗುವಿಕೆಯ ಪ್ರಕ್ರಿಯೆಯ ಮೂಲಕವೇ ಹಾದು ಹೋಗುತ್ತಾರೆ. ಮಾನ್ಸೂನ್ ರಾಗ ಈ ಎಲ್ಲದರ ಬಗ್ಗೆ ಮತ್ತು ಇನ್ನೂ ಹೆಚ್ಚಿನದರ ಕುರಿತು ಮಾತನಾಡುತ್ತದೆ' ಎನ್ನುತ್ತಾರೆ.

ಧನಂಜಯ್ ಮತ್ತು ರಚಿತಾ ರಾಮ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದು, 'ಯಾವುದಾದರೊಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಬೇಕೆಂದು ನಾವು ಬಯಸಿದ್ದೆವು. ಅಂತಿಮವಾಗಿ ಅದು ಮಾನ್ಸೂನ್ ರಾಗದ ಮೂಲಕ ನಿಜವಾಯಿತು. ಆಕೆ ಒಳ್ಳೆಯ ನಟಿ. ತನ್ನ ಕಣ್ಣುಗಳಿಂದಲೇ ಬಹಳಷ್ಟು ವ್ಯಕ್ತಪಡಿಸುತ್ತಾರೆ. ಆಕೆ ಸೆಟ್‌ಗೆ ಬಂದರೆ ಎನರ್ಜಿಟಿಕ್ ವಾತಾವರಣವನ್ನು ತರುತ್ತಾರೆ. ಈ ಸಿನಿಮಾದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ಬಂದಿದ್ದು, ಇನ್ನಷ್ಟು ಸಿನಿಮಾಗಳಲ್ಲಿ ನಟಿಸಲು ಬಯಸುತ್ತೇವೆ' ಎಂದು ಅವರು ಹೇಳುತ್ತಾರೆ.

ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ಛಾಪು ಮೂಡಿಸಿರುವ ಧನಂಜಯ್, ಅಲ್ಲು ಅರ್ಜುನ್-ಸುಕುಮಾರ್ ಅವರ ಬ್ಲಾಕ್‌ಬಸ್ಟರ್ ಹಿಟ್ ಪುಷ್ಪಾ ಚಿತ್ರದ ಭಾಗವಾಗಿದ್ದರು. ಪುಷ್ಪಾ-2 ಚಿತ್ರದ ಭಾಗವಾಗುವಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಬ್ಬರನ್ನೂ ಭೇಟಿಯಾಗಿದ್ದೆ. ಆದರೆ ನಾವು ಯೋಜನೆಯ ಬಗ್ಗೆ ಮಾತನಾಡಿಲ್ಲ. ನಿರ್ದೇಶಕರ ಕಡೆಯಿಂದ ಮಾಹಿತಿಗಾಗಿ ಕಾಯುತ್ತಿದ್ದೇನೆ' ಎಂದು ತಿಳಿಸಿದರು.

SCROLL FOR NEXT