ಸಿನಿಮಾ ಸುದ್ದಿ

'ಅಮ್ಮ ನೀರು ಕುಡಿದು ಪ್ರಾಣ ಬಿಟ್ಟರು, ಅಮ್ಮಾ ಅಂತ ಕೂಗಿದೆ, ನಮ್ಮ ಬಾಂಧವ್ಯಕ್ಕೆ ಏನು ಹೇಳೋದು'?: ವಿನೋದ್ ರಾಜ್

Sumana Upadhyaya

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ(85 ವ) ನಿನ್ನೆ ಶುಕ್ರವಾರ ಸಂಜೆ ಬೆಂಗಳೂರು ಹೊರವಲಯ ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ನಟಿ ಲೀಲಾವತಿ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು.

ಆದರೆ ನಿನ್ನೆ ಮಧ್ಯಾಹ್ನ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ಅವರ ಪುತ್ರ ವಿನೋದ್ ರಾಜ್ ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ. ಪುತ್ರ ವಿನೋದ್‌ ರಾಜ್‌ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ವಿನೋದ್‌ ರಾಜ್‌ ಆಸ್ಪತ್ರೆ ಎದುರೇ ಕುಸಿದು ಬಿದ್ದಿದ್ದಾರೆ. ಬಳಿಕ ತಾಯಿಯ ಅಂತಿಮ ಕಾರ್ಯದ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದು, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ವಯೋಸಹಜದಿಂದ ಹೃದಯ ಸ್ತಂಭನ ಆಗಿಹೋಯ್ತು. ಭಗವಂತ ನನ್ನ ಒಂಟಿ ಮಾಡಿಬಿಟ್ಟ. ಆಸ್ಪತ್ರೆಗೆ ಕರೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ವೈದ್ಯರು ಬಾಯಿಗೆ ನೀರು ಬಿಡಿ ಎಂದರು, ನಾನು ನೀರು ಕೊಟ್ಟಾಗ ಕುಡಿಯುತ್ತಲೇ ಪ್ರಾಣಬಿಟ್ಟರು, ಅಮ್ಮಾ ಅಂತ ಕೂಗಿದೆ, ನಮ್ಮಿಬ್ಬರ ಬಾಂಧವ್ಯಕ್ಕೆ ಏನು ಹೇಳೋದು, ಅವರ ಆಸ್ಪತ್ರೆ ಉದ್ಘಾಟನೆ ಆಯ್ತು. ಕರುಣ ಎಂಬ ಸಂಸ್ಥೆಯಿದು, ಅದು ಪುಣ್ಯದ ಕೆಲಸ. ಈ ಪೊಲೀಸರೇ ನನ್ನ ಜೊತೆಗಿದ್ದವರು. ನಮ್ಮ ಜೊತೆ ಇವರೆಷ್ಟು ಒದ್ದಾಡಿದರು. ಇವರೇ ನನಗೆ ಅಣ್ಣ ತಮ್ಮಂದಿರು ಎಂದು ಗದ್ಗದಿತರಾದರು. 

‘56 ವರ್ಷಗಳ ಕಾಲ ತಾಯಿ ಜೊತೆ ಕಾಲ ಕಳೆದೆ. ನನ್ನಮ್ಮ ಪ್ರೀತಿಗೆ ಕೊರತೆ ಮಾಡಲಿಲ್ಲ. ಜೀವನ ಪೂರ್ತಿ ನನ್ನ ಕೈಹಿಡಿದುಕೊಂಡೇ ಕಳೆದುಹೋದರು. ನೀರು ಕುಡಿಯುವಾಗಲೇ ಪ್ರಾಣಬಿಟ್ಟರು. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನು 2-3 ತಿಂಗಳಿಂದ ಊಟ ಮಾಡುವುದನ್ನೇ ಬಿಟ್ಟಿದ್ದೆ. ಶಿವರಾಜ್​ಕುಮಾರ್ ಅಪ್ಸೆಟ್ ಆಗಬೇಡಿ ಎಂದು ಹೇಳಿದ್ದಾರೆ. ಎಷ್ಟು ಬೇಡಿಕೊಂಡರೂ ತಾಯಿ ಪಡೆದುಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಅಮ್ಮ ಹೇಳಿದ ತಾಳ್ಮೆ, ಸಮಾಧಾನ ಯಾರೂ ಹೇಳಲು ಸಾಧ್ಯವಿಲ್ಲ. ಅವರ ಸಾಕಷ್ಟು ಕನಸುಗಳಿದ್ದವು, ಬಾಕಿಯಿರುವ ಕೆಲಸ ಮಾಡುತ್ತೇನೆ. ಮನೆಯಿಂದ ಹೊರಡುವಾಗ ಐವತ್ತು ನೂರು ಕೊಟ್ಟು ಹೋಗುತ್ತಿದ್ದರು. ನಮಗಿಂತ ಬlಡತನದಲ್ಲಿರುವವರ ಬೆನ್ನಿಗೆ ನಿಲ್ಲಬೇಕು ಎಂದು ಅಮ್ಮ ಹೇಳುತ್ತಿದ್ದರು, ಅವರ ಆಶಯದಂತೆ ಬದುಕು ಸಾಗಿಸಲು ಪ್ರಯತ್ನಿಸುತ್ತೇನೆ ಎಂದರು.

ನಾನು ಒಬ್ಬಂಟಿಯಾದೆ: ಅಮ್ಮ ಒಂದು ಮಾತು ಹೇಳುತ್ತಿದ್ದರು, ಈಗ ನಾನಿದ್ದೇನೆ, ನನ್ನ ನಂತರ ನಿನಗೆ ಅಭಿಮಾನಿಗಳು, ವಾಹಿನಿಯವರು ಇರುತ್ತಾರೆ, ಅವರ ಜೊತೆಜೊತೆಯಾಗಿ ಸಮಾಜಪರ ಕೆಲಸ ಮಾಡಿಕೊಂಡು ಹೋಗಬೇಕು. ನಾನು ಮನೆಯಲ್ಲಿ ಸುಮ್ಮನೆ ಕುಳಿತರೆ ಹುಚ್ಚನಾಗುತ್ತೇನೆ, ಅಮ್ಮನನ್ನು ಕಳೆದುಕೊಂಡು ಇಂದು ನನಗೆ ಯಾವ ರೀತಿ ನೋವಾಗುತ್ತಿದೆ ಎಂದು ಹೇಳಲು ನನಗೆ ಸಾಧ್ಯವಿಲ್ಲ, ಅನುಭವಿಸಿದವನಿಗೇ ಗೊತ್ತು, ಕೆಲಸ ಮಾಡುತ್ತಾ..ಮಾಡುತ್ತಾ ಆ ನೋವನ್ನು ನಾನು ಮರೆಯಬೇಕಷ್ಟೆ ಎನ್ನುತ್ತಾರೆ. 

ವಿನೋದ್ ಪತ್ನಿ, ಪುತ್ರ: ಇತ್ತೀಚೆಗೆ ವಿನೋದ್ ರಾಜ್ ವೈವಾಹಿಕ ಜೀವನದ ಬಗ್ಗೆ ಸುದ್ದಿಯಾಗಿತ್ತು, ಅವರಿಗೆ ಮದುವೆಯಾಗಿ ಬೆಳೆದು ನಿಂತ ಮಗನಿದ್ದಾನೆ. ಪತ್ನಿ ಮತ್ತು ಪುತ್ರ ಚೆನ್ನೈಯಲ್ಲಿದ್ದಾರೆ, ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ ಎಂದೆಲ್ಲ ಸುದ್ದಿಯಾಗಿತ್ತು. 

ಇಂದು ಲೀಲಾವತಿಯವರ ನಿಧನ ನಂತರ ಸಾರ್ವಜನಿಕ ಅಂತಿಮ ದರ್ಶನ ವೇಳೆ ವಿನೋದ್ ಪತ್ನಿ ಮತ್ತು ಪುತ್ರ ಭಾಗಿಯಾಗಿದ್ದಾರೆ. 

SCROLL FOR NEXT